ಅವಿರೋಧ ಆಯ್ಕೆ
ಬ್ಯಾಡಗಿ,ಆ20: ಪಟ್ಟಣದ ಪುರಸಭೆಯ ನೂತನ ಅದ್ಯಕ್ಷರಾಗಿ ಬಿಜೆಪಿಯ ಬಾಲಚಂದ್ರಗೌಡ. ಎಸ್. ಪಾಟೀಲ, ಉಪಾಧ್ಯಕ್ಷರಾಗಿ ಸುಭಾಸ.ಡಿ.ಮಾಳಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ಪುರಸಭೆಯ ಸಭಾಂಗಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಈ ಇಬ್ಬರನ್ನೂ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ ಫಿರೋಜ್ ಷಾ ಸೋಮನಕಟ್ಟಿ ಅವರು ಬಾಲಚಂದ್ರಗೌಡ. ಎಸ್. ಪಾಟೀಲ ಅಧ್ಯಕ್ಷರಾಗಿ, ಸುಭಾಸ.ಡಿ.ಮಾಳಗಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಪುರಸಭೆಯಲ್ಲಿ 23 ಸದಸ್ಯರ ಬಲಾಬಲ ಇದ್ದು, ಅದರಲ್ಲಿ ಬಿಜೆಪಿ 17 ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಸ್ಪಷ್ಟ ಬಹುಮತವನ್ನು ಹೊಂದಿತ್ತು. ಕೇವಲ 6 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಬಹುಮತದ ಅವಕಾಶ ಇಲ್ಲದ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿತ್ತು ಎನ್ನಲಾಗಿದೆ.
