ಬದುಕಿನ ಸಾರ್ಥಕತೆಗೆ ಕಾಯಕ, ನಂಬಿಕೆ, ತಾಳ್ಮೆ ಅಗತ್ಯ
ಕಲಬುರಗಿ: ಆ.20:ಮನುಷ್ಯ ಇಂದು ದಾವಂತದಲ್ಲಿದ್ದಾನೆ. ಜೀವನದ ನೈಜತೆಯನ್ನು ಅರಿಯದೇ ಕಷ್ಟಕ್ಕೆ ಗುರಿಯಾಗುತ್ತಿದ್ದಾನೆ. ಎಲ್ಲರು ಸತ್ಯಶುದ್ಧವಾದ ಕಾಯಕ ಮಾಡಬೇಕು. ಪರಸ್ಪರ ಪ್ರೀತಿ, ನಂಬಿಕೆ, ತಾಳ್ಮೆಯಿಂದಿರಬೇಕು. ದುರಾಸೆ ಬೇಡ, ಇರುವುದರಲ್ಲಿಯೇ ತೃಪ್ತಿಯುತ ಜೀವನ ಸಾಗಿಸಿದರೆ ಬದುಕು ಸಾರ್ಥಕತೆ ಪಡೆಯಲು ಸಾದ್ಯವಿದೆ ಎಂದು ಮಕ್ತಂಪುರ ಗದ್ದುಗೆಮಠದ ಪೂಜ್ಯ ಚರಲಿಂಗ ಶ್ರೀಗಳು ಹೇಳಿದರು.
ನಗರದ ಜಗತ್ ಬಡಾವಣೆಯ ಅಗಸ್ತ್ಯತೀರ್ಥ ಪರಿವಾರದಿಂದ ತಮ್ಮ ಪರಿವಾರದ ಆವರಣದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಜರುಗುತ್ತಿರುವ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಮಹಾಪುರಾಣದ 75ನೇ ವರ್ಷಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆರ್ಶಿವಚನ ನೀಡುತ್ತಿದ್ದರು.
ಶರಣಬಸವೇಶ್ವರರ ಜೀವನ ನಮ್ಮೆಲ್ಲಿರುಗೂ ಮಾದರಿಯಾಗಿದೆ. ಬಸವಾದಿ ಶರಣರ ತತ್ವವನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ. ಪರಸ್ಪರ ಹೊಂದಾಣಿಕೆ ಇದ್ದರೆ ಸಂಸಾರ ಅರ್ಥಪೂರ್ಣವಾಗುತ್ತದೆ. ವರದಕ್ಷಿಣೆ ಸಾಮಾಜಿಕ ಪಿಡುಗಾಗಿದ್ದು, ಇದು ದೂರವಾಗಬೇಕು. ಆದ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೆಕು. ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಶರಣಬಸವೇಶ್ವವರರ ದಾಸೋಹ ಕಲ್ಪನೆ ಅದ್ಭುತವಾದದ್ದು. ಅವರಲ್ಲಿರುವ ಸಮಾಪರ ಕಾಳಜಿಯಿಂದ ಇಂದು ಅಸಂಖ್ಯಾತ ಭಕ್ತರ ಪಾಲಿನ ಕಾಮಧೇನುವಾಗಿದ್ದಾರೆ. ಶರಣರ ಪವಿತ್ರ ಭೂಮಿಯಲ್ಲಿರುವುದೇ ಸೌಭಾಗ್ಯವಾಗಿದೆ ಎಂದರು.
ಖ್ಯಾತ ಪ್ರವಚನಕಾರ ವಿ.ಎಸ್.ಚತುರಾಚಾರ್ಯ ಮಠ ಅವರು ಪುರಾಣ ಪ್ರವಚನ ಮಾಡಿದರು. ಅಶೋಕ ಪಾಟೀಲ, ಸಿದ್ದಯ್ಯಸ್ವಾಮಿ, ನಾಗಭೂಷಣ ಅಗಸ್ತ್ಯತೀರ್ಥ ಸಂಗೀತ ಸೇವೆ ನೀಡಿದರು. ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕ ಸಿದ್ದರಾಮ ತಳವಾರ, ಶಿವಶರಣಪ್ಪ ಹಾಲೋಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.