ಕಿತ್ತೂರು ಉತ್ಸವಕ್ಕೆ 5 ಕೋಟಿ ರೂ. ಅನುದಾನ
ಚನ್ನಮ್ಮನ ಕಿತ್ತೂರು,ಆ20: ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿಸಿದ ರಾಣಿ ಚನ್ನಮ್ಮನ ವಿಜಯೋತ್ಸವ ಅಕ್ಟೋಬರ್ 23ಕ್ಕೆ ನಡೆಯಲಿದ್ದು, 200 ವರ್ಷದ ವೈಭವದ ಕಿತ್ತೂರು ಉತ್ಸವದ ನಿಮಿತ್ಯ ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಕಿತ್ತೂರು ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಕಿತ್ತೂರು ಉತ್ಸವಕ್ಕೆ ರೂ. 5 ಕೋಟಿ ಅನುದಾನ ಬಿಡುಗಡೆಗೆ ಅಧಿಕೃತವಾಗಿ ಚಾಲನೆ ನೀಡಿದರು.
200 ವರ್ಷದ ಕಿತ್ತೂರು ಉತ್ಸವ ಸಂಭ್ರಮದ ಆಚರಣೆಯ ನಿಮಿತ್ಯ ಕಿತ್ತೂರಿನಲ್ಲಿ ರಾಣಿ ಚೆನ್ನಮ್ಮ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಕೋರಿಕೊಂಡಿದ್ದರು. ಅವರ ಕೋರಿಕೆ ಮೇರೆಗೆ ಕಂದಾಯ ಸಚಿವರು 35 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕಿತ್ತೂರಿನ ಕೋಟೆ ಆವರಣದಲ್ಲಿರುವ 7 ಎಕರೆ ಜಾಗದಲ್ಲಿ ಭವ್ಯವಾದ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಸೂಚಿಸಿ ಅನುಮೋದನೆ ನೀಡಿದರು.
ಈ ವೇಳೆ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿ.ಪಂ. ಸಿ.ಇ.ಓ. ರಾಹುಲ ಶಿಂಧೆ, ಉಪ ವಿಭಾಗ ಅಧಿಕಾರಿ ಪ್ರಭಾವತಿ ಪಕ್ಕಿರಪೂರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕ್ಯೂರೇಟರ್ ರಾಘವೇಂದ್ರ, ಸಂತೋಷ ಹಾನಗಲ್ಲ, ಅಸ್ಪಾಕ ಹವಾಲ್ದಾರ, ಸೇರಿದಂತೆ ಇತರರಿದ್ದರು.