ವಿಮುಕ್ತ ಬುಡಕಟ್ಟುಗಳನ್ನು ನೋಡುವ ದೃಷ್ಠಿಕೋನ ಬದಲಿಸಿ : ವಿಕಾಸ್ ಎಚ್.ಎಸ್.
ಸಂಜೆವಾಣಿ ವಾರ್ತೆ
ಹೊಸಪೇಟೆ ಆ20: ವಿಮುಕ್ತಿ ಹಾಗೂ ಬುಡಕಟ್ಟು ಸಮಾದಾಯಗಳನ್ನು ಸಮಾಜದಲ್ಲಿ ಇಂದಿಗೂ ನೋಡುವ ದೃಷ್ಠಿಕೋನ ಬದಲಾಗಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಂಶೋಧನಾರ್ಥಿಯಾದ ವಿಕಾಸ್ ಎಚ್.ಎಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ ಆಯೋಜಿಸಿದ್ದ ಸಮಾಜಮುಖಿ ತಿಂಗಳ ಮಾತು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾರ್ಧಿ ಬುಡಕಟ್ಟಿನ ಸಾಮಾಜಿಕ ಸಂಕಥನ ಎಂಬ ಸಂಶೋಧನಾ ವಿಷಯವನ್ನು ಮಂಡಿಸಿದರು. ಭಾರತವನ್ನು ಆಕ್ರಮಿಸಿದ ಬ್ರಿಟಿಷರು ಇಲ್ಲಿನ ಸಾಮ್ರಜ್ಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಇದರಿಂದ ರಾಜರು ತಮ್ಮ ಸ್ಥಾನಮಾನವನ್ನು ಕಳೆದುಕೊಂಡರೆ ಆ ರಾಜರನ್ನು ಆಶ್ರಯಿಸಿ ಕೆಲಸ ಮಾಡುತ್ತಿದ್ದ ಹಲವಾರು ಬುಡಕಟ್ಟು ಸಮುದಾಯಗಳು ಕೆಲಸಗಳಿಂದ ವಂಚಿತರಾದರು. ಇದು ಜನರ ಜೀವನದ ಮೇಲೆ ಪ್ರಭಾವ ಬೀರಿತು. ಪಾರ್ಧಿ ಬುಡಕಟ್ಟು ಸಮುದಾಯವು ಜೀವನಾಧಾರಕ್ಕೆ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡಿತು. ಈ ಕೃತ್ಯಗಳನ್ನು ತಡೆಯಲು ಅಂದಿನ ಬ್ರಿಟಿಷ್ ಸರ್ಕಾರ ಅಪರಾಧಿ ಬುಡಕಟ್ಟುಗಳ ಕಾಯ್ದೆ-1871ನ್ನು ಜಾರಿಗೆ ತಂದಿತು. ಕಾಯ್ದೆಯ ಪ್ರಕಾರ ಸಮುದಾಯದ ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ಇಡೀ ಸಮುದಾಯವನ್ನು ಅಪರಾಧಿ ಸಮುದಾಯ ಎಂಬ ಹಣೆಪಟ್ಟಿಯನ್ನು ನೀಡಿತು. ಇದರ ಮೂಲಕ ಆ ಸಮುದಾಯದ ಜೀವಿಸುವ ಮೂಲಭೂತ ಹಕ್ಕನ್ನು ಕಸಿಯಲಾಯಿತು ಎಂದು ಕಳವಳ ವ್ಯಕ್ತಪಡಿಸಿದರು.
ಪಾರ್ದಿ ಬುಡಕಟ್ಟಿನ ಮೂಲ ಗುಜರಾತು. ಇವರು ರಾಜರ ಆಸ್ಥಾನಗಳಲ್ಲಿ ಅಂಗರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪಾರ್ಧಿ ಬುಡಕಟ್ಟು ಇಂದು ಜನಸಂಖ್ಯಾವಾರು 18000 ಮಾತ್ರ ಇದ್ದರೂ, ಅವರದೇ ಆದ ಭಾಷೆ, ಸಂಪ್ರದಾಯ, ಆಚರಣೆಯಲ್ಲಿ ವಿಭಿನ್ನತೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಇವರ ಸಮುದಾಯದಲ್ಲಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ದಂಡ ವಿಧಿಸುವ ಪಧ್ದತಿಯು ಅನುಕರಣೀಯವಾದದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಮಾತನಾಡುತ್ತಾ, ಕರ್ನಾಟಕ ಒಳಗೊಂಡಂತೆ ಭಾರತದಲ್ಲಿ ನಮಗೆ ಗೋಚರಿಸದ ಅನೇಕ ಅಪರೂಪದ ಬುಡಕಟ್ಟುಗಳಿವೆ. ಇಂತಹ ಬುಡಕಟ್ಟುಗಳ ಕುರಿತು ಸಂಶೋಧನೆ ಕೈಗೊಳ್ಳುವ ಮೂಲಕ ಸಮಾಜದಲ್ಲಿ ಅವುಗಳ ಇರುವಿಕೆಯನ್ನು ತೋರಿಸಿಕೊಡಬೇಕು ಎಂದರು. ಪಾರ್ಧಿ ಎಂಬುದು ಅಪರೂಪದ ಬುಡಕಟ್ಟು. ಈ ಬುಡಕಟ್ಟು ಸಮುದಾಯದಲ್ಲಿ ಸಮಾಜವು ಅಳವಡಿಸಿ ಕೊಳ್ಳುವಂತಹ ಅನೇಕ ಉತ್ತಮ ಅಂಶಗಳನ್ನು ಹೊಂದಿರುವುದು ಪ್ರಶಂಸನೀಯ ಎಂದರು. ಈ ಸಮುದಾಯದಲ್ಲಿ ಅಪರಾಧ ಪ್ರಕರಣಗಳ ವಿಚಾರಣೆಗೆ ಅಗ್ನಿ ದಿವ್ಯ, ಮುಳ್ಳು ದಿವ್ಯ, ಜಲದಿವ್ಯ ಎಂಬ ಸಪ್ತದಿವ್ಯಗಳ ಮೂಲಕ ನ್ಯಾಯದ ನಿರ್ಣಯವನ್ನು ಮಾಡುತ್ತಿರುವುದು ಗಮನಾರ್ಹ ಎಂದರು.
ಈ ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾದ ಡಾ ಈ.ಯರ್ರಿಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಭಾಗದ ಸಂಶೋಧನಾರ್ಥಿ ಮೋಹನ್‍ಕುಮಾರ್ ನಿರೂಪಿಸಿದರು. ಸಂಶೋಧನಾರ್ಥಿ ವಿರೂಪಾಕ್ಷ ಸ್ವಾಗತಿಸಿದರು, ರಾಜು ವಂದಿಸಿದರು.