ರೋಗ ಮುಕ್ತ ಜೀವನಕ್ಕೆ  ಹಣ್ಣು ಸಹಕಾರಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ,20- ಹಣ್ಣು ತಿಂದು  ರೋಗ ಮುಕ್ತ ಜೀವನ ನಡೆಸಬಹುದೆಂದು ಶಾಲೆಯ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ಮಕ್ಕಳನ್ನು ಊರಹೊರಗಿನ ಆಂಧ್ರಪ್ರದೇಶ ರಾಜ್ಯದ ರೈತ ವೆಂಕಟರತ್ನಂ ತೋಟಕ್ಕೆ ಭೇಟಿ ನೀಡಿಸಿ ಅಲ್ಲಿ ಬೆಳೆಯುತ್ತಿರುವ ವಿವಿಧ ಹಣ್ಣು,ಹೂ ಹಾಗೂ ಸೊಪ್ಪಿನ ಗಿಡಮರಗಳನ್ನು ತೋರಿಸುತ್ತಾ ವಿಷಯ ಮಂಡಿಸಿದ ಅವರು ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ನಮ್ಮ ಮನೆಯ ಆವರಣ ಹಾಗೂ ಸುತ್ತ ಮುತ್ತ ಬೆಳೆದು ಬಳಕೆ ಮಾಡುವುದರಿಂದ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯದಿಂದ ಇರಬಹುದು ಎಂದು ಹೇಳಿದರು.
ರೈತ ವೆಂಕಟರತ್ನಂ ನೆಲ್ಲಿಕಾಯಿ ಹಾಗೂ ತುಳಸಿ ಗಿಡದ ವೈಶಿಷ್ಟ್ಯ ವಿವರಿಸಿ,ಕಾರ್ತಿಕ ಮಾಸದಲ್ಲಿ ಇವೆರಡಕ್ಕೂ ಮದುವೆ ಮಾಡಿ ಪೂಜೆ ಮಾಡಿಸುತ್ತಾರೆ.ನೆಲ್ಲಿಕಾಯಿ ತಿನ್ನುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದರು.
ಸಮಾಜ ಶಿಕ್ಷಕಿ ಶಶಮ್ಮ ಸೀತಾಫಲ ಹಾಗೂ ಕಿತ್ತಳೆ ಹಣ್ಣಿನ ವೈಶಿಷ್ಟ್ಯ ಮತ್ತು ಉಪಯೋಗ ತಿಳಿಸುತ್ತಾ ಸೀತಾಫಲ ತಿನ್ನುವುದರಿಂದ ದೇಶದ ಹೆಚ್ಚಿನ ಉಷ್ಣತೆ ಕಡಿಮೆ ಮಾಡಬಹುದು.ಇದನ್ನು ಹೆಚ್ಚಾಗಿ ಮೊಳಕಾಲ್ಮುರುನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದು ಮಳೆ ಹಾಗೂ ಚಳಿಗಾಲದಲ್ಲಿ ಬೆಳೆಯುತ್ತಾರೆ ಎಂದು ತಿಳಿಸಿದರು.
ಶಿಕ್ಷಕ ರಾಮಾಂಜನೇಯ ಡ್ರ್ಯಾಗನ್ ಫ್ರೂಟ್ ನ ಸಿಪ್ಪೆ ಗುಲಾಬಿ ಬಣ್ಣ,ಒಳಗಿನ ಭಾಗ ಬಿಳಿಯಾಗಿರುತ್ತದೆ.ಇದನ್ನು ತಿನ್ನುವುದರಿಂದ ಕ್ಯಾನ್ಸರ್ ಹಾಗೂ ಮದುಮೇಹದಂತಹ ಕಾಯಿಲೆ ಗುಣಪಡಿಸಬಹುದು.
ಕೂದಲು ಹಾಗೂ ಚರ್ಮದ ಬಣ್ಣ ಮೃದುವಾಗಿಸಬಹುದು. ಇದು ಹೆಚ್ಚು ದುಬಾರಿ ಎಂದು ಹೇಳಿದರು.
ನಂತರ ನೈದಿಲೆ,ಸೇವಂತಿ,ದುಂಡುಮಲ್ಲಿಗೆ,ದಾಸವಾಳ,ಕಣಗಿಲೆ,ಕನಕಾಂಬರ ಹೂ ಹಾಗೂ ಜಾಮು,ನಿಂಬೆ,ಬಾಳೆ, ಬೆಂಡೆ,ತೊಂಡೆ,ಮುಸುಂಬೆ,ನಾರಂಗಿ,ತೆಂಗು ಮುಂತಾದ ಗಿಡ ಮರಗಳನ್ನು ವೀಕ್ಷಿಸಿ ವರದಿ ತಯಾರಿಸಿ ಕೊಂಡ ಮಕ್ಕಳು ಶಿಕ್ಷಕರೊಂದಿಗೆ ಸಂತಸ ವ್ಯಕ್ತಪಡಿಸಿದರು.