ವಿಶ್ವ ಸೊಳ್ಳೆ ದಿನಾಚರಣೆ:ಡೆಂಗ್ಯೂ, ಮಲೇರಿಯಾ ನಿಯಂತ್ರಣ ಗುರಿಯಾಗಲಿ
ಸಂಜೆವಾಣಿ ವಾರ್ತೆ.
ಸಿಂಧನೂರು ಆ.೨೦ ಡೆಂಗ್ಯೂ, ಮಲೇರಿಯಾ ಸೊಳ್ಳೆಗಳ ಕಡಿತದಿಂದ ಹರಡುವ ರೋಗಗಳಾಗಿದ್ದು ಇವುಗಳ ನಿಯಂತ್ರಣ ನಮ್ಮೆಲ್ಲರ ಗುರಿಯಾಗಲಿ ಎಂದು ಆರ್.ಬಿ.ಎಸ್.ಕೆ ವೈದ್ಯರಾದ ಡಾ.ಅಯ್ಯನಗೌಡ ತಿಳಿಸಿದರು.
ಇಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಸೊಳ್ಳೆ ದಿನ ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು.
ಭಾರತೀಯ ಮೂಲದ ಬ್ರಿಟನ್ ವೈದ್ಯ ರೊನಾಲ್ಡ್ ರಾಸ್ ಅವರು ಮಲೇರಿಯಾ ಹರಡಲು ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯೇ ಕಾರಣ ಎಂಬ ವಿಷಯವನ್ನು ಕಂಡು ಹಿಡಿದಿದ್ದು ಸಂಶೋಧನೆಯ ನೆನಪಾಗಿಯೂ ಸೊಳ್ಳೆ ದಿನ ಆಚರಿಸಲಾಗುತ್ತದೆ.ರೊನಾಲ್ಡ್ ರಾಸ್ ೧೯೦೨ ರಲ್ಲೇ ವಿಶ್ವ ಸೊಳ್ಳೆ ದಿನ ಎಂದು ಮೊದಲ ಬಾರಿಗೆ ಘೋಷಿಸಿದರು.
ಅಂದಿನಿಂದ ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನು ಆಚರಣೆ ಮಾಡಲಾಗುತ್ತಿದೆ.ಸೊಳ್ಳೆ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸ ಜಿಲ್ಲಾ ಪಂಚಾಯತ ಅಡಿಯಲ್ಲಿ ಸಿಂಧನೂರು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದಿಂದ ನಡೆಸ ಲಾಗುತ್ತಿದೆ ಎಂದರು.
ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರಾಪಿಕಲ್ ಮೆಡಿಸಿನ್ ಸಂಸ್ಥೆಯು ಪ್ರತಿವರ್ಷ ಸೊಳ್ಳೆ ದಿನವನ್ನು ಆಯೋಜಿಸುತ್ತದೆ.ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರತಿ ವರ್ಷ ೪,೩೫,೦೦೦ ಜನರು ಮಲೇರಿಯಾದಿಂದ ಸಾಯುತ್ತಾರಂತೆ. ಇದಲ್ಲದೆ, ಪ್ರಪಂಚದಲ್ಲಿ ವರ್ಷಕ್ಕೆ ೨೧೯ ಮಿಲಿಯನ್ ಮಲೇರಿಯಾ ಪ್ರಕರಣಗಳ ದಾಖಲಾಗುತ್ತವೆ ಎಂದು ಅಂದಾಜಿಸಲಾಗಿದೆ. ಈ ಅಂಕಿ ಅಂಶಗಳನ್ನು ನೋಡಿದ ಮೇಲೆ ಗೋತ್ತಾಗುತ್ತದೆ ಸೊಳ್ಳೆ ಎಷ್ಟು ಅಪಯಾಕಾರಿ ಕೀಟ ಎಂದು. ವಿಶ್ವದಲ್ಲಿ ಇದುವರೆಗೂ ಸುಮಾರು ನಾಲ್ಕುವರೆ ಕೋಟಿ ಜನರು ಸೊಳ್ಳೆ ಕಡಿತದಿಂದ ಉಂಟಾದ ವಿವಿಧ ರೋಗಗಳಿಗೆ ಬಲಿಯಾಗಿದ್ದಾರೆ. ಸೊಳ್ಳೆಗಳು ೧೦ ರಿಂದ ೫೦ ಮೀಟರ್ ದೂರದಿಂದ ಮನುಷ್ಯನ ಉಸಿರಾಟವನ್ನು ಗುರುತಿಸಬಲ್ಲವು. ೫-೧೦ ಮೀಟರ್ ವ್ಯಾಪ್ತಿಯಲ್ಲಿ ಮನುಷ್ಯನನ್ನು ನೋಡಬಲ್ಲವು. ೨೦ ಸೆಂ.ಮೀಟರ್ ವ್ಯಾಪ್ತಿಯಲ್ಲಿ ಮನುಷ್ಯನ ದೇಹದ ಉಷ್ಣತೆ ಮತ್ತು ಬೆವರನ್ನು ಗ್ರಹಿಸಬಲ್ಲ ಶಕ್ತಿ ಸೊಳ್ಳೆಗಳಿಗಿದೆ ಆದ್ದರಿಂದ ಮಳೆಗಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೋಗ ಹರಡುವ ಶಕ್ತಿ ಈ ಸೊಳ್ಳೆಗಳಿಗೆ ಇದೆ. ಜ್ವರ ಬಂದ ತಕ್ಷಣ ನಿರ್ಲಕ್ಷ್ಯ ಮಾಡದೆ ರಕ್ತ ಪರೀಕ್ಷೆ ಮಾಡಿಸಿ ಮನೆಯ ಸುತ್ತ ಮುತ್ತಲಿನ ಪರಿಸರದಲ್ಲಿ ನೀರು ನಿಲ್ಲಬಾರದು, ಮನೆಯಲ್ಲಿ ನೀರು ತುಂಬುವ ಪರಿಕರಗಳು/ ಪಾತ್ರೆಗಳನ್ನು ಮುಚ್ಚಿಡಿ ಅಥವಾ ಬಟ್ಟೆ ಯಿಂದ ಮುಚ್ಚಿಡಿ, ವಾರದಲ್ಲಿ ಒಂದು ದಿನ ಡ್ರೈ ಡೆ ಆಚರಿ ಸೊಳ್ಳೆ ನಾಶಪಡಿಸಿ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ, ಮನೆಯ ಸುತ್ತ ಮುತ್ತ ಸೊಳ್ಳೆ ಬಾರದಂತೆ ತಡೆಯುವ ಸಸ್ಯಗಳನ್ನು ಬೆಳೆಸಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ಈರಣ್ಣ,ಡಾ.ಸಂಗನಗೌಡ,ಗೀತಾ ಹಿರೇಮಠ,ಎಫ್ ಎ ಹಣಗಿ,ರೇಣುಕಾ,ಯಮನೂರ, ರಾಜಮಾ,ನಿಂಗಮ್ಮ,ಮಲ್ಲಿಕಾರ್ಜುನ,ನಾಗಮ್ಮ,ಸರಸ್ವತಿ,ಶಿವಗಂಗಾ ಸೇರಿದಂತೆ ಆಶಾ ಕಾರ್ಯಕರ್ತೆಯರು ,ಆಸ್ಪತ್ರೆ ಸಿಬ್ಬಂದಿ ಗಳು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.