ದೇವರಾಜು ಅರಸ-ನಾರಾಯಣಗುರುಗಳ ಜಯಂತಿ ಆಚರಣೆ
ಸಿರವಾರ.ಅ೨೦:ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ದೇಶದಲ್ಲಿ ಮೊದಲ ಭಾರಿಗೆ ಭೂ ಸುಧಾರಣೆ ಕಾಯ್ದೆ ಜಾರಿ ಮೂಲಕ ಉಳುವವನೆ ಭೂ ಒಡೆಯ ಕಾನೂನು ಜಾರಿಗೆ ತಂದವರು ಮಾಜಿ ಮುಖ್ಯಮಂತ್ರಿ ಡಿ ದೇವರಾಜು ಅರಸು ಅವರು ಎಂದು ತಹಸೀಲ್ದಾರ ರವಿ ಎಸ್ ಅಂಗಡಿ ಹೇಳಿದರು. ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜು ಅರಸ್ ಹಾಗೂ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿ ನಂತರ ಮಾತನಾಡಿದ ಅವರು ೮ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಜನ ಮಾನಸದಲ್ಲಿ ಉಳಿಯುವಂತಹ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದರು. ಭೂ ಸುಧಾರಣೆ ಕಾನೂನು ಜಾರಿಗೆ ತಂದು ೭೦.೮೦ ಲಕ್ಷ ರೈತರಿಗೆ ಉಳುವವನೆ ಭೂ ಒಡೆಯ ಪಟ್ಟವನ್ನು ಒದಗಿಸಿಕೊಟ್ಟರು. ಹಾವನೂರು ಆಯೋಗ ಜಾರಿ ಮೂಲಕ ಹಿಂದುಳಿದ ವರ್ಗಗಳಿಗೆ ಶೇ.೨೭ರಷ್ಟು ಮೀಸಲಾತಿ ಜಾರಿಗೆ ತಂದರು. ಬಿಸಿಎಂ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಮಲ ಹೊರುವ ಪದ್ದತಿ ನಿರ್ಮೂಲನೆ ಮಾಡಿ ಪೌರ ಕಾರ್ಮಿಕರೆಂದು ಕರೆಯಲು ಹೇಳಿದರು” ರಾಜ್ಯದ ?ಮೈಸೂರು? ಹೆಸರನ್ನು ಕರ್ನಾಟಕ ಎಂದು ಬದಲಿಸಿ ಇತಿಹಾಸ ನಿರ್ಮಿಸಿದರು. ಶ್ರೀ ನಾರಾಯಣ ಗುರುಗಳು ತತ್ವಜ್ಞಾನಿ, ಆಧ್ಯಾತ್ಮಿಕ ನಾಯಕ ಮತ್ತು ಸಮಾಜ ಸುಧಾರಕರಾಗಿದ್ದರು. ಕೇರಳದ ಜಾತಿ-ಮುಕ್ತ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕ ಜ್ಞಾನೋದಯ ಮತ್ತು ಸಾಮಾಜಿಕ ಸಮಾನತೆಯನ್ನು ಬೆಳೆಸಲು, ಅವರು ಅನ್ಯಾಯದ ವಿರುದ್ಧ ಸುಧಾರಣಾ ಪ್ರಯತ್ನವನ್ನು ಪ್ರಾರಂಭಿಸಿದರು. ಅವರ ಸಮುದಾಯದವರೆ ಆದ ಎಸ್ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು, ದೇಶವೆ ಹೆಮ್ಮೆ ಪಡುವ ವರನಟ ಡಾ.ರಾಜಕುಮಾರ್, ಪುನೀತ್ ರಾಜಕುಮಾರ ಈ ಸಮುದಾಯದವರು ಎಂಬುದು ಸ್ಮರಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರೇಡ್ ೨ ತಹಸೀಲ್ದಾರ ಅಬ್ದುಲ್ ವಾಹೀದ್, ಶಿರಸ್ತೆದಾರ ಪಕೃದ್ದಿನ್, ನಾಡತಹಸೀಲ್ದಾರ ಸಿದ್ದನಗೌಡ, ಕಂದಾಯ ನಿರೀಕ್ಷಕ ಶ್ರೀನಾಥ, ಎಸ್ ಡಿ ಎ ಈರೇಶ,ದಯಾನಂದ,ಸಿಬ್ಬಂದಿಗಳಾದ ಅಮರ, ಶರಣಬಸವ,ಶಕುಂತಲ, ಲಾವಣ್ಯ,ಶ್ರೀದೇವಿ,ವಿಜಯಲಕ್ಷ್ಮಿ, ಹಿಂದುಳುದ ಸಮಾಜದ ಉಪಾದ್ಯಕ್ಷ ಚಂದ್ರಶೇಖರ ಹಡಪದ್, ಕಾರ್ಯಾದ್ಯಕ್ಷ ಹುಲಿಗೆಪ್ಪ ಮಡಿವಾಳ,ಲಕ್ಷ್ಮಣಗುತ್ತೆದಾರ,ಆರ್ಯ ಈಡಿಗ ಸಮಾಜದ ತಾ.ಅ ರಾಮನಗೌಡ, ಜಂಬಣ್ಣಗುತ್ತೆದಾರ, ಅಶೋಕಗುತ್ತೆದಾರೆ ಕಡದಿನ್ನಿ, ಭಿಮರಾಜ, ಗೋಪಾಲಗೌಡ ಕಡದಿನ್ನಿ, ನಾಗರಾಜ ಶಾಖಾಪೂರು, ನಾಗೇಶ, ಭೀಮರಾಜ ಎಂ.ಜಿ ಕ್ಯಾಂಪ್ ಸೇರಿದಂತೆ ಇನ್ನಿತರರು ಇದರು.