ಸಂವಿಧಾನ ಎಲ್ಲರಿಗೂ ಸಮಾನತೆ: ಶಂಶುದ್ದೀನ್
ದೇವದುರ್ಗ.ಆ೨೦: ಸಂವಿಧಾನದಲ್ಲಿ ಕಡುಬಡವರಿಂದ ಅತಿ ದೊಡ್ಡ ಶ್ರೀಮಂತರವರೆಗೂ ಪ್ರತಿಯೊಬ್ಬರೂ ಸಮಾನರು ಮತ್ತು ಕಾನೂನು ಎಲ್ಲರನ್ನೂ ಸಮಾನವಾಗಿ ರಕ್ಷಿಸುವ ಹೊಣೆಯನ್ನು ಹೊತ್ತಿದೆ ಎಂದು ಶಾವಂತಗೇರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಶುದ್ಧೀನ್ ನಾಗಡದಿನ್ನಿ ಹೇಳಿದರು.
ಸಂವಿಧಾನ ಎಂದರೆ ಜನರು ಹೋರಾಟ ಮಾಡಿ ಪಡೆದುಕೊಂಡ ಹಕ್ಕುಗಳಿಗೆ ಕಾನೂನಿನ ಚೌಕಟ್ಟು ನೀಡುವ ರಾಜಕೀಯ ದಾಖಲೆ. ವಿದ್ಯಾರ್ಥಿಗಳು ಇಂತಹ ಸಂವಿಧಾನ ಬಗ್ಗೆ ವಿದ್ಯಾರ್ಥಿದೆಸೆಯಲ್ಲಿ ಸರಿಯಾಗಿ ತಿಳಿದುಕೊಳ್ಳಬೇಕು. ನಮ್ಮಂತಹ ಬಡವರು ಇವತ್ತು ಅಧಿಕಾರಿಯಾಗಿರುವದಕ್ಕೆ ಸಂವಿಧಾನವೇ ಕಾರಣವಾಗಿದೆ. ಈ ಸಂಸ್ಥೆ ಮಕ್ಕಳಲ್ಲಿ ಸಂವಿಧಾನ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಶಂಶುದ್ದೀನ್ ನಾಗಡದಿನ್ನಿ ತಿಳಿಸಿದರು.
ತಾಲೂಕಿನ ಹಿರೇರಾಯಕುಂಪಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಗಬ್ಬೂರಿನ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ (ರಿ) ಆಯೋಜಿಸಿದ್ದ “ಸಂವಿಧಾನದ ಕಡೆ ವಿದ್ಯಾರ್ಥಿಗಳೊ ನಡೆ” ಕಾರ್ಯಕ್ರಮವನ್ನು ಉದ್ಘಾಟಿಸಿ, ನೀಡಿದರು.
ಲಕ್ಷ್ಮಿ ವೆಂಕಟೇಶ್ವರ ಕಾಲೇಜಿನ ಉಪನ್ಯಾಸಕ ಚಿದಾನಂದ ಶಾವಂತಗೇರಾ ಉಪನ್ಯಾಸ ನೀಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಸಂವಿಧಾನ ಕುರಿತು ಮಾತನಾಡಿದರು.
ಬಸವೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಹನುಮಂತ್ರಾಯ ಶಾವಂತಗೇರಾ ಸಂವಿಧಾನ ಪೀಠಿಕೆ ಬೋಧಿಸಿದರು.
ಸಂಸ್ಥೆಯ ಸಂಚಾಲಕ ಗುರುನಾಥ ಇಂಗಳದಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ನಮ್ಮ ಸಂವಿಧಾನದ ಕೇಳಿ ಬರುತ್ತಿರುವ ಅಪಸ್ವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಉಂಟಾಗುವ ಗೊಂದಲವನ್ನು ನಿವಾರಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಸರಿಯಾದ ತಿಳುವಳಿಕೆ ಮೂಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯಗುರು ಯಲ್ಲಪ್ಪ ಹಂದ್ರಾಳ ಮಾತನಾಡಿ ಸಂವಿಧಾನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಎಂದು ತಿಳಿಸಿದರು.
ಸಂವಿಧಾನದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಹಾಗೆಯೇ ಶಾಲಾ ಗ್ರಂಥಾಲಯಗಳಿಗೆ ಸಂವಿಧಾನದ ಪುಸ್ತಕಗಳನ್ನು ಸಂಸ್ಥೆ ವತಿಯಿಂದ ವಿತರಿಸಲಾಯಿತು.
ವೇದಿಕೆಯಲ್ಲಿ ಮುಖಂಡರಾದ ರತ್ನಾಕರ ಶಾವಂತಗೇರಾ, ಮೋಹನಕುಮಾರಿ ಸಿಂಗ್ರಿ, ರಾಮಣ್ಣ ಮಶಿಹಾಳ, ವಿದ್ಯಾರ್ಥಿ ಪ್ರತಿನಿಧಿ ರಾಧಿಕಾ,ಶಿಕ್ಷಕರಾದ ಪವನಕುಮಾರ, ಬಸವಲಿಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಾನಿಯಾ ಬೇಗಂ ಸಂಗಡಿಗರ ಪ್ರಾರ್ಥನೆ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಶಿಕ್ಷಕ ಶರಣಪ್ಪ ಸ್ವಾಗತಿಸಿದರೆ, ಆಫ್ರೀನ್ ನಿರೂಪಿಸಿದರು. ಭವಾನಿ ವಂದಿಸಿದರು.
ಪೋಟೋ೨೦ಡಿವಿಡಿ.,೩.