ಕಬಕದಿಂದ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿರುವ ಬಗ್ಗೆ ೧೧೨ಗೆ ಅನಾಮಿಕನ ಕರೆಪೊಲೀಸರಿಂದ ನಾಕಾಬಂದಿ – ತಡರಾತ್ರಿವರೆಗೆ ಕಾದು ಸುಸ್ತಾದ ಪೊಲೀಸರು
ಸುಳ್ಯ:ಪುತ್ತೂರು ಸಮೀಪದ ಕಬಕದಿಂದ ಕಾರಿನಲ್ಲಿ ನನ್ನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಆದ್ದರಿಂದ ನನ್ನನ್ನು ರಕ್ಷಣೆ ಮಾಡಿ ಅನ್ನುವ ಕರೆ ತಡ ರಾತ್ರಿ ೧೧೨ ಗೆ ಬಂದ ಹಿನ್ನೆಲೆಯಲ್ಲಿ ಜಾಲ್ಸೂರು ಹಾಗೂ ಸುಳ್ಯದಲ್ಲಿ ಪೊಲೀಸರು ನಾಕಾ ಬಂದಿ ಹಾಕಿ ಕಾದು ಸುಸ್ತಾದ ಘಟನೆ ನಡೆದಿದೆ.
ಅನಾಮಿಕ ವ್ಯಕ್ತಿಯೊಬ್ಬ ಈ ಕರೆ ಮಾಡಿದ್ದು ’ನನ್ನನ್ನು ಆಲ್ಟೋ ಕಾರಿನಲ್ಲಿ ಕಿಡ್ಯ್ನಾಪ್ ಮಾಡಲಾಗಿದೆ. ತಕ್ಷಣ ಬಚಾವ್ ಮಾಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಕರೆ ಬಂದ ತಕ್ಷಣ ೧೧೨ ರವರು ಪುತ್ತೂರು ಟೌನ್ ಪೊಲೀಸ್ ಠಾಣೆಗೆ ತಿಳಿಸಿದ್ದು, ಅವರು ಕೂಡಲೇ ವಯರ್ಲೆಸ್ಸ್ ಮೂಲಕ ಸುಳ್ಯ ಹಾಗೂ ಇನ್ನಿತರ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಸುಳ್ಯ ಪೊಲೀಸರು ಸುಳ್ಯ ಹಾಗೂ ಜಾಲ್ಸೂರು ಬಳಿ ನಾಕಾ ಬಂದಿ ಹಾಕಿ ಬಹಳ ಸಮಯ ಕಾದು ಕುಳಿತಿದ್ದು, ಬಳಿಕ ಯಾವುದೇ ವಾಹನ ಆ ದಾರಿಯಲ್ಲಿ ಬರದೇ ಇದ್ದಾಗ ಅಲ್ಲಿಂದ ಪೊಲೀಸರು ಮರಳಿದ್ದಾರೆ. ಈ ಬಗ್ಗೆ ಕರೆ ಮಾಡಿದವರು ಯಾರು ಎಂದು ತನಿಖೆ ನಡೆಸುತ್ತಿದ್ದಾರೆ.