ಪೋಲೀಸರ ಮೇಲೆ ಹಲ್ಲೆ ಆರೋಪ : ಆರೋಪಿ ನಿರ್ದೋಷಿ
ಸುಳ್ಯ:ಪೋಲೀಸರಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ್ದಾರೆಂಬ ಆರೋಪದ ಕೇಸು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸರಕಾರಿ ಅಭಿಯೋಜಕರು ಕೇಸನ್ನು ಸಾಬೀತು ಮಾಡಲು ವಿಫಲವಾಗಿದ್ದು, ಆರೋಪಿಯನ್ನು .ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
೨೦೨೦ ಎಪ್ರಿಲ್ ೧ ರಂದು ಕೊರೋನಾ ಸಂದರ್ಭ ಮಂಡೆಕೋಲು ಗ್ರಾಮದ ಮುರೂರು ಚೆಕ್ ಪೋಸ್ಟ್ ಮೂಲಕ ವಾಹನಕ್ಕೆ ನಿಬಂಧ ಹೇರಲಾಗಿತ್ತು. ಈ ವೇಳೆ ಆ ರಸ್ತೆಯಾಗಿ ಕಾಸರಗೋಡಿನಿಂದ ವಾಹನದಲ್ಲಿ ಸಿನಾನ್ ಎಂಬವರು ಬಂದಿದ್ದರು. ಮುರೂರು ಚೆಕ್ ಪೋಸ್ಟ್‌ನಲ್ಲಿ ಪೋಲೀಸರು ತಡೆದಿದ್ದರು. ಈ ವೇಳೆ ಆರೋಪಿಯು ಕರ್ತವ್ಯದಲ್ಲಿದ್ದ ಪೋಲೀಸರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿತ್ತು. ಸಿನಾನ್ ರನ್ನು ಪೋಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದು ಆರೋಪಿಯ ಆರೋಪವನ್ನು ರುಜುವಾತು ಪಡಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಯನ್ನು ದೋಷಮುಕ್ತಗೊಳಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ. ಸಿನಾನ್‌ರ ಪರವಾಗಿ ನ್ಯಾಯವಾದಿಗಳಾದ ಶ್ಯಾಂ ಪಾನತ್ತಿಲ, ಪ್ರತಿಭಾ ಶ್ಯಾಂ ಪಾನತ್ತಿಲ ಹಾಗೂ ರಕ್ಷಿತಾ ಹರಿ ಉಳುವಾರು ವಾದಿಸಿದ್ದಾರೆ.