ಆಡಳಿತ ವ್ಯವಸ್ಥೆಯ ಪರಿಕಲ್ಪನೆ ಬದಲಾಗಬೇಕು
ಸಂಜೆವಾಣಿ ನ್ಯೂಸ್
ಮೈಸೂರು: ಆ.20:– ಈಗಿನ ಕಾಲಮಾನಕ್ಕೆ ತಕ್ಕಂತೆ ದೇಶದ ಆಡಳಿತ ವ್ಯವಸ್ಥೆಯ ಪರಿಕಲ್ಪನೆ ಬದಲಾವಣೆಯಾದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಜಯದೇವ ಹೈದ್ರೋಗ ಸಂಸ್ಥೆ ವಿಶ್ರಾಂತ ನಿರ್ದೇಶಕ ಹಾಗೂ ಸಂಸದರೂ ಆಗಿರುವ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದಿಂದ ಸೋಮವಾರ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯುತ್ತಮ ಕಟ್ಟಡಗಳು, ಉಪಕರಣಗಳು, ಯಂತ್ರಗಳನ್ನು ಅನುಷ್ಠಾನ ಮಾಡಿದ ತಕ್ಷಣ ಸಮಾಜಕ್ಕೆ ಉತ್ತಮ ಸೇವೆಗಳನ್ನು ನೀಡಲು ಆಗುವುದಿಲ್ಲ. ಬದಲಾಗಿ ಅಗತ್ಯಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಸೃಜನೆ ಮಾಡಬೇಕು. ಆಗ ಎಲ್ಲರಿಗೂ ಸಮರ್ಪಕ ಸೇವೆ ದೊರೆಯುತ್ತದೆ. ಸಾವಿರ ಕೋಟಿ ರೂ ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಾರೆ. 200 ಕೋಟಿ ವೆಚ್ಚ ಮಾಡಿ ಮಾನವ ಸಂಪನ್ಮೂಲ ನೇಮಕಾತಿ ಮಾಡಿಕೊಳ್ಳಲು ಹಿಂದೆ-ಮುಂದೆ ನೋಡುತ್ತಾರೆ. ಆಸ್ಪತ್ರೆಗಳು ಬೃಹತ್ತಾಗಿ ಕಾಣುತ್ತವೆ, ಅಲ್ಲಿ ಸರ್ಜನ್ ಇಲ್ಲ, ವೈದ್ಯರು ಇಲ್ಲ, ಟೆಕ್ನಿಷಿಯನ್ ಇರುವುದಿಲ್ಲ. ಕಾಲೇಜುಗಳು ಕಟ್ಟಡಗಳು ಚನ್ನಾಗಿ ಇರುತ್ತವೆ. ಅಲ್ಲಿ ಸಮರ್ಪಕ ಬೋಧಕ ಸಿಬ್ಬಂದಿ ಇರುವುದಿಲ್ಲ. ನಮ್ಮ ಆಡಳಿತ ವ್ಯವಸ್ಥೆಯೂ ದಾರಿ ತಪ್ಪುತ್ತಿರುವುದೇ ಇಲ್ಲಿ. ಕಟ್ಟಡಗಳ ನಿರ್ಮಾಣಕ್ಕೆ ಅನುಮೋದನೆ ಕೊಡುವ ಸಚಿವ ಸಂಪುಟ ನೇಮಕಾತಿ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತಾಳುತ್ತದೆ. ಕ್ಯಾಬಿನೆಟ್ ನಿರ್ಧಾರವನ್ನು ಇಲಾಖೆಯ ವಿಷಯ ನಿರ್ವಾಹಕ (ಕೇಸ್ ವರ್ಕರ್) ಇದು ಸರಿಯಲ್ಲ ಎಂದು ಷರಾ ಬರೆಯುತ್ತಾನೆ. ಆದ್ದರಿಂದ ಆಡಳಿತ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳು ಆಗಬೇಕು. ಒಂದು ಕಟ್ಟಡ ನಿರ್ಮಾಣದ ಹೊತ್ತಿನಲ್ಲೇ ಅದಕ್ಕೆ ತಕ್ಕನಾದ ಹುದ್ದೆಗಳನ್ನು ಸೃಜನೆ ಮಾಡಿ, ನೇಮಕಾತಿ ಮಾಡಿಕೊಂಡು, ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಆಗಬೇಕು ಎಂದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರ್ಕಾರ ಅನುದಾನವನ್ನು ಹೆಚ್ಚಾಗಿ ಕೊಡಬೇಕು. ಪ್ರಸ್ತುತ ನಮ್ಮ ದೇಶದ ಜಿಡಿಪಿಯಲ್ಲಿ ಶೇ.2ರಷ್ಟನ್ನು ಮಾತ್ರ ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡಲಾಗುತ್ತಿದೆ. ಇದು ಬದಲಾವಣೆಯಾಗಬೇಕು. ಶೇ.5ರಷ್ಟನ್ನು ನೀಡಬೇಕು. ಆಗ ವ್ಯವಸ್ಥೆ ಉತ್ತಮವಾಗುತ್ತದೆ. ದೇಶದ ಅಭಿವೃದ್ಧಿಯೂ ಆಗುತ್ತದೆ. ಇದಲ್ಲದೇ ನಮ್ಮಲ್ಲಿ ಈಗಲೂ ಬ್ರಿಟೀಷರ ಕಾಲದ ಕಾಯ್ದೆಗಳು ಹಲವಾರು ಇಲಾಖೆಗಳಲ್ಲಿ ಹಾಗೇ ಮುಂದುವರೆದುಕೊಂಡು ಬಂದಿವೆ. ಕಾಲದ ಬದಲಾವಣೆಗೆ ಪೂರಕವಾಗಿ ಕಾಯ್ದೆಗಳನ್ನು ಮಾರ್ಪಾಡು ಮಾಡಬೇಕು ಎಂದರು.
ಯಾವುದೇ ಒಂದು ಸಂಸ್ಥೆಯ ಅಭಿವೃದ್ಧಿ ಮತ್ತು ನೇಮಕಾತಿ ವಿಚಾರದಲ್ಲಿ ಸರ್ಕಾರಗಳು ಮೂಗು ತೂರಿಸಬಾರದು. ಸಂಸ್ಥೆಯ ಆಗುಹೋಗು ಅಲ್ಲಿನ ಮುಖ್ಯಸ್ಥನಿಗೆ ಗೊತ್ತಿರುತ್ತದೆ. ನಮಗೆ 40 ಸ್ಟಾಫ್ ನರ್ಸ್‍ಗಳು ಬೇಕು ಎಂದು ಕ್ಯಾಬಿನೆಟ್‍ಗೆ ಮನವಿ ಸಲ್ಲಿಸಿದರೆ, ಅಷ್ಟು ಯಾಕೆ ಬೇಕು, 10 ಜನರು ಸಾಕು ಎಂದು ಅನುಮೋದನೆ ನೀಡುವುದು. ವಿಶ್ವವಿದ್ಯಾನಿಲಯಕ್ಕೆ ಯಾಕೆ ನೇಮಕಾತಿ ಮಾಡಿಕೊಳ್ಳಬೇಕು ಎನ್ನುವುದು. ಈ ರೀತಿಯ ಭಿಕ್ಷೆ ಬೇಡುವ ಪ್ರಕ್ರಿಯೆಯ ಕ್ರಮ ಮೊದಲು ನಿಲ್ಲಬೇಕು. ಅಧಿಕಾರ ಸ್ಥಳೀಯ ಮುಖ್ಯಸ್ಥನಿಗೆ ದೊರೆಯಬೇಕು ಎಂದು ವಿಶ್ಲೇಷಣೆ ಮಾಡಿದರು.
ಸಚಿವರ, ಜನಪ್ರತಿನಿಧಿಗಳ ಮನೆಯಲ್ಲಿ ಆಡುಗೆ ಮಾಡುವವರು, ಕಾರಿನ ಚಾಲಕರು, ಮಸಾಜ್ ಮಾಡುವವರು ಅಧಿಕಾರಿಗಳನ್ನು ಬದಲಾವಣೆ ಮಾಡುವ ಮಟ್ಟಕ್ಕೆ ಬೆಳೆದಿರುತ್ತಾರೆ. ಸಚಿವರು, ಜನಪ್ರತಿನಿಧಿಗಳು ಕೂಡ ಅವರ ಮಾತನ್ನು ಕೇಳುತ್ತಾರೆ ಎಂದರೇ ವ್ಯವಸ್ಥೆ ಯಾವ ರೀತಿ ಇದೆ ಎನ್ನುವುದು ತಿಳಿಯುತ್ತದೆ ಎಂದು ಖೇದ ವ್ಯಕ್ತಪಡಿಸಿದರು.
ಇದೇ ವೇಳೆ ಡಾ.ಸುಕನ್ಯಾ ಸೂನಗಹಳ್ಳಿ ಅವರು ಸಂಪಾದನೆ ಮಾಡಿರುವ ಡಾ.ಸಿ.ಎನ್.ಮಂಜುನಾಥ್ ಅವರ ಅಭಿನಂದನಾ ಗ್ರಂಥ ಆಧುನಿಕ ಧನ್ವಂತರಿ, ಮೈವಿವಿಯ ಜೆನೆಟಿಕ್‍ಸ್ ಮತ್ತು ಜಿನೋಮಿಕ್‍ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ಸುತ್ತೂರು ಎಸ್.ಮಾಲಿನಿ ಬರೆದಿರುವ ಪುರುಷರ ಲೈಂಗಿಕ ಆರೋಗ್ಯ, ಮಹಿಳೆಯ ಲೈಂಗಿಕ ಆರೋಗ್ಯ ಪುಸ್ತಕಗಳು ಸಮಾರಂಭದಲ್ಲಿ ಲೋಕಾರ್ಪಣೆಗೊಂಡವು.
ಧನಾತ್ಮಕತೆ ಬೆಳೆಸಿಕೊಳ್ಳಬೇಕು: ಋಣಾತ್ಮಕ ಧೋರಣೆ ಹೊಂದಿರುವ ಜನರು, ಅಧಿಕಾರಿಗಳು ಒಂದು ರೀತಿಯಲ್ಲಿ ಸಾಮಾಜಿಕ ಭಯೋತ್ಪಾದಕರು. ಇವರು ತಮ್ಮ ಧೋರಣೆಗಳಿಂದಾಗಿ ಇಡೀ ವ್ಯವಸ್ಥೆಯನ್ನೇ ಕೊಂದುಬಿಡುತ್ತಾರೆ. ಸರ್ವನಾಶ ಮಾಡಿಬಿಡುತ್ತಾರೆ. ಋಣಾತ್ಮಕ ಭಾವನೆ ಹೊಂದಿರುವ ಜನರು ಯಾವ ಪರಿಸರದಲ್ಲಿದ್ದರೂ ಅಲ್ಲಿ ಜಗಳಗಳೇ ಆಗುತ್ತಿರುತ್ತವೆ. ಇವರು ಸಂಸ್ಥೆಗಳನ್ನು ಬೆಳೆಯಿಸುವುದಿಲ್ಲ, ಇಲಾಖೆಗಳನ್ನು ಬೆಳೆಯಿಸುವುದಿಲ್ಲ, ಕೊನೆಗೆ ತಮ್ಮ ಮನೆಯನ್ನೂ ಕೂಡ ಬೆಳೆಯಿಸುವುದಿಲ್ಲ. ಅದಕ್ಕಾಗಿಯೇ ಜೀವನದಲ್ಲಿ ಧನಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಇದು ಯಶಸ್ಸಿನ ಜೀವನಕ್ಕೆ ಸ್ಫೂರ್ತಿಯ ಚಿಲುಮೆಯಾಗುತ್ತದೆ ಎಂದು ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಮೈವಿವಿ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್.ರಂಗಪ್ಪ, ಪೆÇ್ರ.ಸಿ.ನಾಗಣ್ಣ, ಡಾ.ಸಿ.ಶರತ್‍ಕುಮಾರ್, ಪೆÇ್ರ.ಚಿಕ್ಕತಿಮ್ಮಯ್ಯ, ಡಾ.ಸುತ್ತೂರು ಎಸ್.ಮಾಲಿನಿ ವೇದಿಕೆಯಲ್ಲಿ ಇದ್ದರು.