ಪ್ರಾಸಿಕ್ಯೂಷನ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.20:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ, ರಾಜ್ಯಪಾಲರನ್ನು ಕರ್ನಾಟಕದಿಂದ ವಾಪಸ್ ಕರೆಯಿಸಿಕೊಳ್ಳುವಂತೆ ಒತ್ತಾಯಿಸಿ ರಾಜ್ಯಪಾಲ ಹಠಾವೋ-ಕರ್ನಾಟಕ ಬಚಾವೋ ಹೆಸರಿನಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ಸಾವಿರಾರು ಕಾರ್ಯಕರ್ತರು ರಾಜ್ಯಪಾಲರ ನಡೆ ಖಂಡಿಸಿದರು. ಸಾರ್ವಜನಿಕ ಸಭೆ ನಡೆಸಿದ ಬಳಿಕ ಮೆರವಣಿಗೆ ಹೊರಟ ಕಾರ್ಯಕರ್ತರು ದೊಡ್ಡ ಗಡಿಯಾರ ವೃತ್ತ, ಸಂಗಂ ಚಿತ್ರಮಂದಿರ ರಸ್ತೆ, ಛತ್ರಿಮರದ ರಸ್ತೆ, ಸಂದೇಶ್ ದಿ ಪ್ರಿನ್ಸ್ ಹೋಟೆಲ್ ರಸ್ತೆ, ನಜರ್‍ಬಾದ್ ಮುಖ್ಯರಸ್ತೆ, ಗೋಪಾಲಗೌಡ ಆಸ್ಪತ್ರೆ ವೃತ್ತ, ಮಹದೇಶ್ವರ ರಸ್ತೆ ಮೂಲಕ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿದರು.
ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರದ ಬಳಿ ತಲುಪುತ್ತಿದ್ದಂತೆ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಲೇ ಒಳಗೆ ಪ್ರವೇಶಿಸಲು ಯತ್ನಿಸಿದರು. ನಾವು ಯಾಕೆ ಹೊರಗೆ ನಿಲ್ಲಬೇಕು. ಕಚೇರಿ ಮುಂಭಾಗವೇ ತೆರಳುವಂತೆ ಹೇಳಿ ನುಗ್ಗಲು ಮುಂದಾದಾಗ ಪೆÇಲೀಸರು ತಡೆದರು. ಈ ವೇಳೆ ಹಿರಿಯ ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಿ ಸುಮ್ಮನಿರಿಸಿದರು. ನಂತರ, ಪ್ರತಿಭಟನಾಕಾರರ ಬಳಿಗೆ ಆಗಮಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.
ಸರ್ಕಾರ ಕೆಡವಲು ಸಾಧ್ಯವಿಲ್ಲ:
ಇದಕ್ಕೂ ಮೊದಲು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಚಿವ ಮಹದೇವಪ್ಪ, ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ಮಾಡಿದ್ದಾರೆ. ಇದರ ಹಿಂದೆ ಸಾಕಷ್ಟು ಚರ್ಚೆಗಳು ನಡೆದಿದೆ. ಬಿಜೆಪಿ, ಜೆಡಿಎಸ್‍ನವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದ್ದಾರೆ. ಕೇಂದ್ರ ಸರ್ಕಾರದ ಸಹಕಾರದಿಂದ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದಾರೆ. ಮುಡಾ ತನ್ನ ತಪ್ಪನ್ನು ತಾನೇ ಒಪ್ಪಿಕೊಂಡಿದೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ ಎಂದು ಪ್ರಶ್ನಿಸಿದರು.
ಯಾವುದೇ ಆಧಾರವಿಲ್ಲದೆ ಖಾಸಗಿ ವ್ಯಕ್ತಿಯ ದೂರಿಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ನೀಡಿದ್ದೀರಾ. ವಾಮಮಾರ್ಗದ ಮೂಲಕ ಬಿಜೆಪಿ ಸರ್ಕಾರ ತರಲು ಮುಂದಾಗಿದ್ದಾರೆ. ಅನಾಮಿಕ ಕಂಪನಿಗೆ 500 ಎಕರೆ ನೀಡಿರುವ ವಿಚಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಮೇಲೆ ಲೋಕಾಯುಕ್ತ ವರದಿ ಇದೆ. ಇವರ ವಿರುದ್ಧ ನ್ಯಾಯಾಂಗ ತನಿಖೆಗೆ ಯಾಕೆ ಅನುಮತಿ ನೀಡಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಈ ರಾಜ್ಯದ ಪ್ರಾಮಾಣಿಕ ರಾಜಕಾರಣಿ. ದಲಿತರ ಬಗ್ಗೆ ಮಾತನಾಡುವ ಬಿಜೆಪಿ ಎಷ್ಟು ಅನುದಾನ ದಲಿತ ಸಮುದಾಯಕ್ಕೆ ಕೊಟ್ಟಿದ್ದೀರಾ. ಪ್ರಾಮಾಣಿಕ ರಾಜಕಾರಣಿ, ಜನಾದೇಶ ಪಡೆದಿರುವ ಈ ಸರ್ಕಾರ ಕೆಡವಲು ಸಾಧ್ಯವಿಲ್ಲ ಎಂದು ಹೇಳಿದರು.
ಶಾಸಕ ತನ್ವಿರ್ ಸೇಠ್ ಮಾತನಾಡಿ, ಸಿದ್ದರಾಮಯ್ಯ ಯಾವುದೇ ವಿಚಾರದಲ್ಲಿ ಯಾರಿಗೂ ಶಿಫಾರಸ್ಸು ಮಾಡಿಲ್ಲ. ನಿವೇಶನ ಹಂಚಿಕೆ ಮಾಡುವ ವೇಳೆ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ.
ರಾಜ್ಯಪಾಲರ ಕ್ರಮ ಸಂವಿಧಾನ ವಿರೋಧಿಯಾಗಿದೆ. ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮುಂದೆ ಹೋಗಬೇಕಿದೆ. ಸಚಿವರು, ಶಾಸಕರು, ಪರಿಷತ್ ಸದಸ್ಯರು ಸಿದ್ದರಾಮಯ್ಯ ಬೆನ್ನ ಹಿಂದೆ ಇದ್ದಾರೆ. ನೀಚ ರಾಜಕಾರಣ ಮಾಡುತ್ತಿರುವ ಜೆಡಿಎಸ್, ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ. ಸಿದ್ದರಾಮಯ್ಯನವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಭವಿಷ್ಯ ನುಡಿದರು.
ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಕೆ.ಹರೀಶ್‍ಗೌಡ, ದರ್ಶನ್ ಧ್ರುವನಾರಾಯಣ್, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಎಚ್.ಪಿ.ಮಂಜುನಾಥ್, ಕಳಲೆ ಕೇಶವಮೂರ್ತಿ, ಮರಿತಿಬ್ಬೇಗೌಡ, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ, ಮಾಜಿ ಮೇಯರ್ ನಾರಾಯಣ, ಆರಿಫ್ ಹುಸೇನ್, ಅನಂತು, ಎಚ್.ಎನ್.ಶ್ರೀಕಂಠಯ್ಯ ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ, ಬಿ.ಎಲ್.ಭೈರಪ್ಪ, ನಗರಪಾಲಿಕೆ ಮಾಜಿ ಸದಸ್ಯರಾದ ಲೋಕೇಶ್ ಪಿಯಾ, ಕೆ.ವಿ.ಮಲ್ಲೇಶ್, ಜೆ.ಗೋಪಿ, ಸುನಿಲ್, ಶೋಭಾ ಸುನಿಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.