ಒತ್ತುವರಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಕೋಲಾರ; ಆ.೨೦-: ಜಿಲ್ಲಾದ್ಯಂತ ಒತ್ತುವರಿ ಆಗಿರುವ ಕೆರೆ ರಾಜಕಾಲುವೆ ತೆರೆವುಗೊಳಿಸಲು ವಿಶೇಷ ಕಂದಾಯ ಸರ್ವೇ ಅಧಿಕಾರಿಗಳ ತಂಡ ರಚನೆ ಮಾಡಿ ಒತ್ತುವರಿ ದಾರರು ಹಾಗೂ ನಕಲಿ ದಾಖಲೆಗಳನ್ನು ಸೃಷ್ಠಿಸಿರುವ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಮುಂಗಾರು ಮಳೆಯಿಂದ ರೈತರ ಬೆಳೆ ಜನಸಾಮಾನ್ಯರ ಬದುಕನ್ನು ರಕ್ಷಣೆ ಮಾಡಬೇಕೆಂದು ಉಪ ವಿಭಾಗಧಿಕಾರಿಗಳ ಕಚೇರಿಯ ತಹಶೀಲ್ದಾರ್ ಮಂಜುನಾಥ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸರ್ಕಾರಿ ಆಸ್ತಿಗಳನ್ನು ಉಳಿಸಬೇಕಾದ ಕಂದಾಯ ಸರ್ವೇ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳ, ದಲ್ಲಾಳಿಗಳ ತವರುಮನೆಯಾಗಿ ಮಾರ್ಪಟ್ಟು ಜನಸಾಮಾನ್ಯರ ಚಿಕ್ಕ ಕೆಲಸ ಆಗಬೇಕಾದರೆ ತಿಂಗಳಾನುಗಟ್ಟಲೆ ಅಧಿಕಾರಿಗಳನ್ನು ಹುಡುಕಿಕೊಂಡು ಅಲೆದಾಡಬೇಕಾದ ಪರಿಸ್ಥಿತಿ ಇದೆ ಎಂದು ಅವ್ಯವಸ್ಥೆ ವಿರುದ್ಧ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ದೂರಿದರು,
ಜಿಲ್ಲಾದ್ಯಂತ ಸರ್ಕಾರಿ ಕೆರೆ, ರಾಜಕಾಲುವೆ ಒತ್ತುವರಿ ಆಗಿರುವುದರಿಂದ ಮುಂಗಾರು ಮಳೆ ನೀರು ಸರಾಗವಾಗಿ ಕಾಲುವೆಗಳ ಮುಖಾಂತರ ಕೆರೆಗೆ ಹರಿಯಬೇಕಾದ ನೀರು ರೈತರ ಬೆಳೆಗಳಿಗೆ ಬಡವರ ಮನೆಗಳಿಗೆ ನುಗ್ಗಿ ಬದುಕನ್ನು ಬೀದಿಗೆ ತಳ್ಳುತ್ತಿದ್ದರೂ ಒತ್ತುವರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ವಿಫಲವಾಗಿದ್ದಾವೆಂದು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಸರ್ಕಾರಿ ಕಚೇರಿಗಳು ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಚಿನ್ನದ ಮೊಟ್ಟೆಯಿಡುವ ಇಲಾಖೆಗಳಾಗಿ ಮಾರ್ಪಟ್ಟಿವೆ. ಸರ್ಕಾರದಿಂದ ಬಡವರಿಗೆ ಮಂಜೂರಾಗಬೇಕಾದ ಗೋಮಾಳ ಜಮೀನು ನಕಲಿ ಸಾಗುವಳಿ ಚೀಟಿಗಳನ್ನು ಸೃಷ್ಠಿ ಮಾಡಿ ಸಾವಿರಾರು ಎಕರೆ ಜಮೀನನ್ನು ಭೂಗಳ್ಳರಿಗೆ ಮಂಜೂರು ಮಾಡುವ ಮುಖಾಂತರ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಇದನ್ನು ತನಿಖೆ ಮಾಡಿ ಅಕ್ರಮ ಸಾಗುವಳಿ ಚೀಟಿಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು.
ಮಾನ್ಯರು ಎಲ್ಲಾ ತಾಲೂಕು ಕಂದಾಯ ಅಧಿಕಾರಿಗಳನ್ನು ಸಭೆ ಕರೆದು, ಭೂಗಳ್ಳರಿಂದ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಲು ವಿಶೇಷ ಸೂಚನೆ ನೀಡುವ ಜೊತೆಗೆ ೨೦೧೦ ರಿಂದ ಇದುವರೆಗೂ ಮಂಜೂರಾರಗಿರುವ ಭೂಮಿಯ ಸಾಗುವಳಿ ಕಡತಗಳನ್ನು ತನಿಖೆ ಮಾಡಿ ಕೆರೆ, ರಾಜಕಾಲುವೆ, ಗೋಮಾಳ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಪಾರುಕ್‌ಪಾಷ, ಬಂಗಾರಿ ಮಂಜು, ವಿಜಯ್‌ಪಾಲ್, ಭಾಸ್ಕರ್, ಮುನಿಯಪ್ಪ, ಯಲ್ಲಣ್ಣ, ಹರೀಶ್, ಮುದುವಾಡಿ ಚಂದ್ರಪ್ಪ, ಗಿರೀಶ್ ಶೈಲಜ, ವೆಂಕಟಮ್ಮ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ರತ್ನಮ್ಮ, ಗೌರಮ್ಮ ಮುಂತಾದವರಿದ್ದರು.