ಕೆರೆ ಅತಿಕ್ರಮಣ ತೆರವುಗೊಳಿಸದಿದ್ದರೆ ಧರಣಿ ಸತ್ಯಾಗ್ರಹ:ರೈತಸಂಘ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.20: ಪಟ್ಟಣದ ಹೊರವಲಯದ ತೇಗನಹಳ್ಳಿ ಚಿಕ್ಕಕೆರೆಯನ್ನು (ಕಾಳೇಗೌಡನ ಕಟ್ಟೆ) ಖಾಸಗಿ ವ್ಯಕ್ತಿ ಅತಿಕ್ರಮಿಸಿ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡದಿರುವುದು ಮತ್ತು ಹೇಮಾವತಿ ಮುಖ್ಯ ನಾಲೆಯ 54 ನೇ ವಿತರಣಾ ನಾಲೆಯ ಕಳಪೆ ಕಾಮಗಾರಿಗಳ ವಿರುದ್ದ ಇದುವರೆಗೂ ಯಾವುದೇ ಕ್ರಮ ವಹಿಸದಿರುವ ನೀರಾವರಿ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳ ನಿಲುವನ್ನು ತಾಲೂಕು ರೈತಸಂಘ ಮತ್ತು ಕರವೇ ಸಂಘಟನೆಗಳು ಖಂಡಿಸಿದ್ದು ಮುಂದಿನ 15 ದಿನಗಳಲ್ಲಿ ಕ್ರಮ ವಹಿಸದಿದ್ದರೆ ತಾಲೂಕು ಆಡಳಿತ ಸೌಧದ ಮುಂದೆ ಅನಿರ್ಧಿಷ್ಟ ಕಾಲದ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿವೆ.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು ಹಾಗೂ ಕರವೇ ಮುಖಂಡರು ಪ್ರತಿಭಟನೆಯ ಎಚ್ಚರಿಕೆಯ ಸಂದೇಶವನ್ನು ಜಿಲ್ಲಾಡಳಿತಕ್ಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ನಾಯಕ ಎಂ.ವಿ.ರಾಜೇಗೌಡ ಪಟ್ಟಣದ ಹೊರವಲಯದ ತೇಗನಹಳ್ಳಿ ಚಿಕ್ಕ ಕೆರೆಯನ್ನು ಪುರ ಗ್ರಾಮದ ಪ್ರಭಾವಿ ಗುತ್ತಿಗೆದಾರನೊಬ್ಬ ಅತಿಕ್ರಮಿಸಿ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾನೆ. ಕೆರೆಯ ಬಳಿಗೆ ಸಾರ್ವಜನಿಕರು ಬರದಂತೆ ತಂತಿ ಬೇಲಿ ಹಾಕಿದ್ದು ಕೆರೆಯ ಒಳಗೆ ಪಿಲ್ಲರ್ ಹಾಕಿ ಅಕ್ರಮವಾಗಿ ರೆಸಾರ್ಟ್ ಮಾದರಿಯ ಐಷಾರಾಮಿ ಕಟ್ಟಡ ನಿರ್ಮಿಸಿದ್ದಾನೆ. ಕೆರೆಯ ಏರಿಯ ಮೇಲೆ ಕಲ್ಲು ಬೆಂಚುಗಳನ್ನು ಹಾಕಿ ಗ್ರಾಹಕರನ್ನು ಸೆಳೆದು ಪ್ರವಾಸೋದ್ಯಮ ಕೇಂದ್ರವನ್ನಾಗಿಸಿಕೊಳ್ಳುವ ಹುನ್ನಾರ ನಡೆಸಿದ್ದಾನೆಂದರು.
ಸಾರ್ವಜನಿಕ ಕೆರೆಯನ್ನು ಪ್ರಭಾವಿ ವ್ಯಕ್ತಿಯೊಬ್ಬ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದರೂ ನೀರಾವರಿ ಇಲಾಖೆಯಾಗಲೀ ಅಥವಾ ಕೆರೆಗಳನ್ನು ಸಂರಕ್ಷಿಸಿ ಕಾಪಾಡಬೇಕಾದ ಜಿಲ್ಲಾಡಳಿತವಾಗಲೀ ಯಾವುದೇ ಕ್ರಮ ವಹಿಸುತ್ತಿಲ್ಲ. ಖಾಸಗಿ ವ್ಯಕ್ತಿಯ ಹಿಡಿತದಲ್ಲಿರುವ ಸದರಿ ಕೆರೆಗೆ ನೀರಾವರಿ ಇಲಾಖೆ 08- 04-2006 ರಲ್ಲಿ 5.84 ಲಕ್ಷ, 27-09-2006 ರಲ್ಲಿ ಮತ್ತೆ 3.85 ಲಕ್ಷ, ಹಾಗೂ 2009-10ನೇ ಸಾಲಿನಲ್ಲಿ 10 ಲಕ್ಷ ರೂ ಅನುದಾನ ಬಳಸಿ ಅಭಿವೃದ್ದಿಪಡಿಸಿದೆ. ಇದಲ್ಲದೆ ಪ್ರಭಾವಿ ಗುತ್ತಿಗೆದಾರ ಈ ಹಿಂದೆ ತಾಲೂಕು ಪಂಚಾಯತಿ ಸದಸ್ಯನಾಗಿದ್ದ ವೇಳೆ ಕೂಲಿಗಾಗಿ ಕಾಳು ಯೋಜನೆಯಡಿಯಲ್ಲಿ ಹಣ ಬಳಕೆ ಮಾಡಿ ಕೆರೆ ಅಭಿವೃದ್ದಿ ಮಾಡಿದ್ದಾನೆ. ಸರ್ಕಾರಿ ಹಣದಲ್ಲಿ ಅಭಿವೃದ್ದಿಪಡಿಸಿದ ಸಾರ್ವಜನಿಕರ ಕೆರೆ ಖಾಸಗಿ ವ್ಯಕ್ತಿಯ ಪಾಲಾಗಿದೆ. ರೈತ ಹೋರಾಟದ ಫಲವಾಗಿ ಇತ್ತೀಚೆಗೆ (12-08-2024 ರ ಸೋಮುವಾರ) ಹೇಮಾವತಿ ಜಲಾಶಯ ಯೋಜನೆಯ ಅಧೀಕ್ಷಕ ಎಂಜಿನಿಯರ್ ಎಂ.ಎನ್.ಕಿಶೋರ್ ಖುದ್ದು ಭೇಟಿ ನೀಡಿ ಕೆರೆ ಅತಿಕ್ರಮಣ ಮತ್ತು 54 ನೇ ವಿತರಣಾ ನಾಲೆಯ ಕಳಪೆ ಕಾಮಗಾರಿಗಳ ಪರಿಶೀಲನೆ ಮಾಡಿದ್ದಾರೆ. ಖುದ್ದು ಪರಿಶೀಲನೆಯ ಅನಂತರವೂ ಅಧೀಕ್ಷಕ ಎಂಜಿನಿಯರ್ ಎಂ.ಎನ್.ಕಿಶೋರ್ ಕೆರೆ ತೆರವು ಮತ್ತು ವಿತರಣಾ ನಾಲೆಯ ಕಳಪೆ ಕಾಮಗಾರಿಯ ವಿರುದ್ದ ಕ್ರಮವಹಿಸಿಲ್ಲ. 54ನೇ ವಿತರಣಾ ನಾಲೆಯಲ್ಲಿ ಹೂಳೆತ್ತುವ ಮತ್ತು ಜಂಗಲ್ ಕಟ್ಟಿಂಗ್ ಕಾರ್ಯ ಮಾಡದಿದ್ದರೂ ಗುತ್ತಿಗೆದಾರನಿಗೆ 64, 97,675 ರೂ ಅಕ್ರಮ ಬಿಲ್ ಪಾವತಿಸಲಾಗಿದೆ. ಕೆರೆ ಅತಿಕ್ರಮಣವನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಮಂಡ್ಯ ಜಿಲ್ಲಾಧಿಕಾರಿಗಳು ಇದುವರೆಗೂ ಸ್ಥಳ ಪರಿಶೀಲನೆಗೆ ಬಂದಿಲ್ಲ. ಕನಿಷ್ಠ ತಹಸೀಲ್ದಾರರಿಗಾದರೂ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿಲ್ಲ. ಕೆರೆಗಳ ಸಂರಕ್ಷಣೆ ಬಗ್ಗೆ ಸುಪ್ರಿಂ ಕೋರ್ಟ್ ಸ್ವಷ್ಟ ನಿರ್ದೇಶನ ನೀಡಿದ್ದರೂ ಅದನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದರೆ ಏನರ್ಥ? ಎಂದು ಪ್ರಶ್ನಿಸಿದ ಎಂ.ವಿ.ರಾಜೇಗೌಡ ಪ್ರಭಾವಿ ಗುತ್ತಿಗೆದಾರನ ಮುಂದೆ ಜಿಲ್ಲಾಡಳಿತ ಮಂಡಿಯೂರಿರುವ ಅನುಮಾನ ನಮ್ಮನ್ನು ಕಾಡುತ್ತಿದೆ. ಅಧಿಕಾರಿಗಳು ನಿಷ್ಕ್ರಿಯರಾದರೆ ಅರಾಜಕತೆ ಉಂಟಾಗಲಿದೆ ಎಂದು ಎಚ್ಚರಿಸಿದರಲ್ಲದೆ ಅತಿಕ್ರಮಿತ ಕೆರೆ ತೆರವು ಕಾರ್ಯ ಮತ್ತು 54 ನೇ ವಿತರಣಾ ನಾಲೆಯ ಕಳಪೆ ಕಾಮಗಾರಿಯ ವಿರುದ್ದ ಮುಂದಿನ 15 ದಿನಗಳ ಒಳಗೆ ಕ್ರಮವಹಿಸದಿದ್ದರೆ ರೈತಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ ಅನಿರ್ಧಿಷ್ಠ ಕಾಲದ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿದರು.
ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಹಿರಿಯ ರೈತ ಮುಖಂಡ ಕೆ.ಆರ್.ಜಯರಾಂ,ಸಾಮಾಜಿಕ ಹೋರಾಟಗಾರ ಜಯಣ್ಣ, ಎಲ್.ಬಿ.ಜಗದೀಶ್, ಕರೋಟಿ ತಮ್ಮಯ್ಯ, ಹೊನ್ನೇಗೌಡ, ಬ್ಯಾಲದಕೆರೆ ಶಿವಣ್ಣ, ಕೃಷ್ಣಾಪುರ ರಾಜಣ್ಣ, ಮಡುವಿನಕೋಡಿ ಪ್ರಕಾಶ್, ಅರುಣ ಕುಮಾರ್, ಸ್ವಾಮೀಗೌಡ, ತಾಲೂಕು ಕರವೇ ಅಧ್ಯಕ್ಷ ಶ್ರೀನಿವಾಸ್ ಉಪಾಧ್ಯಕ್ಷ ಗೋಪಿ ಸೇರಿದಂತೆ ಹಲವಾರು ರೈತ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.