ಬ್ಯಾಸ್ಕೆಟ್‌ಬಾಲ್ ಚಾಂಪಿಯನ್ ಕೋಲಾರ ತಂಡ, ಅಭಿನಂದನೆ
ಕೋಲಾರ,ಆ,೨೦- ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಜಿಲ್ಲೆಯ ಕಂದಾಯ ಇಲಾಖೆಯ ರಾಜೇಂದ್ರ ಪ್ರಸಾದ್ ನೇತೃತ್ವದ ಬ್ಯಾಸ್ಕೆಟ್ ಬಾಲ್ ತಂಡ ಅಂತಿಮ ಪಂದ್ಯದಲ್ಲಿ ಹಾಸನ ಜಿಲ್ಲೆ ತಂಡವನ್ನು ೪೫-೩೦ ಅಂಕಗಳಿಂದ ಸೋಲಿಸಿ ರಾಜ್ಯಮಟ್ಟದ ಚಾಂಫಿಯನ್ ಆಗಿ ಹೊರಹೊಮ್ಮಿದ್ದು, ತಂಡವನ್ನು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ ಬಾಬು ಅಭಿನಂದಿಸಿದರು.
ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ನೌಕರರ ಕ್ರೀಡಾಕೂಟದ ಬ್ಯಾಸ್ಕೆಟ್‌ಬಾಲ್‌ನಲ್ಲಿ ವಿನ್ನರ್‍ಸ್ ಆಗಿ ಹೊರ ಹೊಮ್ಮಿರುವ ಕೋಲಾರ ಜಿಲ್ಲೆಯ ತಂಡ ತನ್ನ ಮೊದಲ ಪಂದ್ಯವನ್ನು ಚಿಕ್ಕಬಳ್ಳಾಪುರ ತಂಡದೊಂದಿಗೆ ಆಡುವ ಮೂಲಕ ಗೆಲುವು ದಾಖಲಿಸಿತ್ತು. ಇದಾದ ನಂತರ ಸೆಮಿ ಫೈನಲ್‌ಲ್ಲಿ ಮಂಡ್ಯ ಜಿಲ್ಲೆಯ ನೌಕರರ ಸಂಘದ ತಂಡದೊಂದಿಗೆ ಸೆಣಸಿ ಫೈನಲ್‌ಗೆ ಪ್ರವೇಶ ಪಡೆಯಿತು.
ಇದಾದ ನಂತರ ಹಾಸನ ಜಿಲ್ಲಾ ನೌಕರರ ತಂಡದೊಂದಿಗೆ ಅಂತಿಮ ಪಂದ್ಯದಲ್ಲಿ ಸೆಣಸಾಟ ನಡೆಸಿ ೪೫-೩೦ ಅಂಕಗಳ ಭಾರಿ ಅಂತರದಿಂದ ಸೋಲುಣಿಸಿ ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್ ಚಾಂಫಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ತಂಡದಲ್ಲಿ ಕಂದಾಯ ಇಲಾಖೆಯ ರಾಜೇಂದ್ರ ಪ್ರಸಾದ್ ನಾಯಕರಾಗಿದ್ದು, ಇದೇ ಇಲಾಖೆಯ ಗೋಪಾಲಕೃಷ್ಣ, ಲೋಕೇಶ್,ಫಿಲಿಪ್, ಶಿಕ್ಷಣ ಇಲಾಖೆಯ ಪುರುಷೋತ್ತಮ್, ಆರೋಗ್ಯ ಇಲಾಖೆಯ ಗಾಯನ್, ನ್ಯಾಯಾಂಗ ಇಲಾಖೆಯ ದೇವೇಂದ್ರ, ಭರತೇಶ್, ಖಜಾನೆ ಇಲಾಖೆಯ ಜೀವನ್, ಪಶುಸಂಗೋಪನಾ ಇಲಾಖೆಯ ರಾಜೇಂದ್ರ, ಜಿಲ್ಲಾ ತರಬೇತಿ ಇಲಾಖೆಯ ಶೈಲೇಂದ್ರ ಇದ್ದರು.
ತಂಡಕ್ಕೆ ತರಬೇತುದಾರರಾಗಿ ಗುರುಪ್ರಸಾದ್, ವಿಶ್ವನಾಥ್ ಕಾರ್ಯನಿರ್ವಹಿಸಿ ಕೋಲಾರ ಜಿಲ್ಲಾ ನೌಕರರ ತಂಡ ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್ ಚಾಂಫಿಯನ್ ಆಗಿ ಹೊರಹೊಮ್ಮಲು ನೆರವಾದರು.
ರಾಜ್ಯಮಟ್ಟದ ಸಾಧನೆ ಮಾಡಿದ ತಂಡವನ್ನು ಅಭಿನಂದಿಸಿರುವ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಕೋಲಾರ ಜಿಲ್ಲೆಗೆ ಹೆಸರು ತಂದಿದ್ದೀರಿ, ನಿಮ್ಮ ಸಾಧನೆ ಮುಂದುವರೆಸಿ, ಸತತ ಅಭ್ಯಾಸದ ಮೂಲಕ ಮತ್ತಷ್ಟು ಸಾಧನೆ ಮಾಡುವ ಶಕ್ತಿ ಪಡೆದುಕೊಳ್ಳಿ ಎಂದು ತಿಳಿಸಿದರು.