ಆರೋಗ್ಯ ಸೇವೆ ಒದಗಿಸುವುದು ಪುಣ್ಯದ ಕೆಲಸ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.20: ಮೂಕ ಪ್ರಾಣಿಗಳಿಗೆ ಆರೋಗ್ಯ ಸೇವೆ ಒದಗಿಸುವುದು ಒಂದು ಪುಣ್ಯದ ಕೆಲಸವಾಗಿದ್ದು ಈ ನಿಟ್ಟಿನಲ್ಲಿ ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಸಾರಂಗಿ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪಶು ಸೇವೆ ಮಾಡುವುದು ಒಂದು ಪುಣ್ಯದ ಕೆಲಸವಾಗಿದ್ದು ವೈದ್ಯರುಗಳ ಹಾಗೂ ನೌಕರರ ಕೊರತೆಯ ಹಿನ್ನಲೆಯಲ್ಲಿಯೂ ಪಶು ವೈದ್ಯಕೀಯ ಇಲಾಖೆ ಗುಣಮಟ್ಟದ ಸೇವೆ ಒದಗಿಸುತ್ತಿದೆ. ತಾಲೂಕು ಹೈನುಗಾರಿಕೆಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ನಿಮ್ಮ ರಾಸುಗಳ ತುರ್ತು ಚಿಕಿತ್ಸೆಗೆ ಅನುಕೂಲ ಆಗುವಂತೆ ಸಹಾಯವಾಣಿ ಆರಂಭಿಸಿದ್ದು 1962ಕ್ಕೆ ಕರೆ ಮಾಡಿ ಚಿಕಿತ್ಸೆಯ ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.
ತಾಲೂಕಿನ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದದ್ದು ನನ್ನ ಮೊದಲ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಶಾಸಕನಾಗಿ ಸರ್ಕಾರ ಹಾಗೂ ಸಚಿವರೊಂದಿಗೆ ಮತ್ತು ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ನನ್ನ ಶಕ್ತಿ ಮೀರಿ ಅನುದಾನ ತರಲು ಪ್ರಯತ್ನಿಸುತ್ತಿದ್ದೇನೆ. ತಾಲ್ಲೂಕಿಗೆ ಏಳು ಪಶು ಚಿಕಿತ್ಸಾಲಯಗಳು ಅವಶ್ಯಕವಾಗಿ ಬೇಕಾಗಿದ್ದು ಈ ನಿಟ್ಟಿನಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರಲ್ಲಿ ಮನವಿ ಮಾಡಿ ಅಧಿವೇಶನದಲ್ಲಿ ಚರ್ಚಿಸಲಾಗಿತ್ತು ಆದರೆ ಸರ್ಕಾರ ಅನುದಾನದ ಲಭ್ಯತೆಯ ಆಧಾರದ ಮೇಲೆ ಇಡೀ ರಾಜ್ಯಕ್ಕೆ ಕೇವಲ ಹನ್ನೊಂದು ಪಶುಚಿಕಿತ್ಸಾಲಯಗಳನ್ನು ಮೊದಲ ಹಂತದಲ್ಲಿ ಮಂಜೂರು ಮಾಡಿತು. ಅದರಲ್ಲಿ ನಮ್ಮ ತಾಲೂಕಿನ ಸಾರಂಗಿ ಗ್ರಾಮಕ್ಕೆ ಒಂದು ನೀಡಲಾಗಿದೆ ಈ ಸಂದರ್ಭದಲ್ಲಿ ಸಚಿವ ಶ್ರೀ ವೆಂಕಟೇಶರವರಿಗೆ ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ವಿರೋಧಪಕ್ಷದ ಶಾಸಕನಾಗಿ ಅನುದಾನ ತರುವುದು ಸುಲಭದ ಮಾತಲ್ಲ ಹೇಗಿದ್ದರೂ ಸಾರಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 4500 ಹಸುಗಳು 3000 ಎಮ್ಮೆ 5000 ಕುರಿ ಹಾಡುಗಳು ಸೇರಿದಂತೆ ಒಟ್ಟು 13000-14000 ರಾಸುಗಳು ಇದ್ದು ಸಾರಂಗಿ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಅತಿ ಅವಶ್ಯಕವಾಗಿ ಬೇಕಾಗಿತ್ತು ಆದರೆ ಆ ಕನಸು ಈಗ ನನಸಾಗಿದೆ. ನಮ್ಮ ಪಕ್ಷಕ್ಕೆ ಈ ಗ್ರಾಮ ಹಿಂದಿನಿಂದಲೂ ಸಹಕಾರ ನೀಡುತ್ತಾ ಬಂದಿದೆ ಈ ಗ್ರಾಮದ ಕೆರೆ ಏರಿಯನ್ನು ಹಿಗ್ಗಿಸಿ ಕೊಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರ ಅನುದಾನ ನೀಡುವ ಮೂಲಕ ಆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ತಾಲೂಕಿನ ಅತ್ಯಂತ ಬಹುತೇಕ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಸರ್ಕಾರ ಅನುದಾನ ನೀಡುತ್ತಿಲ್ಲ ಹಣವಿಲ್ಲದೇ ಲೋಕೋಪಯೋಗಿ ಇಲಾಖೆ ಕೈಕಟ್ಟಿ ಕುಳಿತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಾಲೂಕಿನ ರಸ್ತೆಯ ಸ್ಥಿತಿಗತಿಗಳ ಬಗ್ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರು ಪಿಎಂಜಿಎಸ್‍ವೈ ಯೋಜನೆ ಅಡಿ 40- 50 ಕಿ.ಮೀ ರಸ್ತೆಯನ್ನು ನಿರ್ಮಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿರುತ್ತಾರೆ. ನನ್ನ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಅನುದಾನದ ನೀಡದ ಹಿನ್ನೆಲೆಯಲ್ಲಿ ಲಭ್ಯವಿರುವ ಅನುದಾನವನ್ನು ತಂದು ತಾಲೂಕಿನ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿದ್ದು ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿ ಬೇಕಾಗಿದೆ. ಅನುದಾನದ ಕೊರತೆಯಾದರೂ ನಿಮ್ಮೊಡನೆ ಸದಾ ಇದ್ದು ನಿಮ್ಮ ಕಷ್ಟಸುಖಗಳಲ್ಲಿ ಭಾಗವಹಿಸಲಿದ್ದೇನೆ.
ಇದೇ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಸುರೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮೋಹನ್, ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜು, ಮನ್ಮಲ್ ಮಾಜಿ ನಿರ್ದೇಶಕ ನಂಜುಂಡೇಗೌಡ, ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ಸೇರಿದಂತೆ ಹಲವರು ಹಾಜರಿದ್ದರು.