ಅತ್ಯಾಚಾರ ಕಡಿವಾಣಕ್ಕೆ ಕಠಿಣ ಕಾನೂನು ರೂಪಿಸಲಿ
ಕೋಲಾರ,ಆ,೨೦- ಇತ್ತೀಚೆಗೆ ಸಮಾಜದಲ್ಲಿ ಹೆಣ್ಣಿನ ಮೇಲೆ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು,ಅದರ ನಿಯಂತ್ರಣಕ್ಕೆ ಸರ್ಕಾರಗಳು ಕಠಿಣ ಕಾನೂನು ರೂಪಿಸುವ ಮೂಲಕ ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕದಂಬ ಸೇವಾ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷ ಹೊಲ್ಲಂಬಳ್ಳಿ ಶಿವು ಮನವಿ ಮಾಡಿದರು.
ನಗರದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಕದಂಬ ಸೇವಾ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨ನೇ ವರ್ಷದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿ ಭೂಮಿ,ನೀರು,ಹಣ ಮುಂತಾದವುಗಳನ್ನೂ ಸಹ ಹೆಣ್ಣಿಗೆ ಹೋಲಿಕೆ ಮಾಡಿ,ಹೆಣ್ಣನ್ನು ದೇವರೆಂದು ಪೂಜಿಸುವ ಕಾಲವೊಂದಿತ್ತು ಆದರೆ ಇತ್ತೀಚೆಗಿನ ದಿನಗಳಲ್ಲಿ ನಿರಂತರವಾಗಿ ಒಂದಿಲ್ಲೊಂದು ಕಡೆ ಅತ್ಯಾಚಾರ,ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು,ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ. ವಯಸ್ಸಿನ ಅಂತರವಿಲ್ಲದೆ,ಸಂಬಂಧಗಳ ಅರಿವಿಲ್ಲದೆ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು ಸಮಾಜಕ್ಕೆ ಮಾರಕವಾಗಿದ್ದು ಸಂಬಂಧಗಳಿಗೆ ಬೆಲೆಯಿಲ್ಲದಂತಾಗಿದೆ. ಈ ಕಾಲಘಟ್ಟದಲ್ಲಿ ಅಣ್ಣ-ತಂಗಿ ಸಂಬಂಧಕ್ಕೂ ತಪ್ಪು ಭಾವನೆಯನ್ನು ಬಿಂಬಿಸುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.
ಸಮಾಜದಲ್ಲಿ ನಿರಂತರವಾಗಿ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಸಹ ಸರ್ಕಾರಗಳು ಕಠಿಣ ಕಾನೂನು ರೂಪಿಸಿ,ತ್ವರಿತಗತಿಯಲ್ಲಿ ಶಿಕ್ಷೆ ವಿಧಿಸದಿರುವುದು ಅಪರಾಧಿಗಳಿಗೆ ಭಯವಿಲ್ಲದಂತಾಗಿದೆ.ಸರ್ಕಾರಗಳು ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ರೂಪಿಸಿ ಎಚ್ಚರಿಕೆ ನೀಡಬೇಕಿದೆ ಎಂದು ತಿಳಿಸಿದರು.
ಸಾಮಾಜಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿತ್ತಿರುವವರು ಮತ್ತು ಸೋಮೇಶ್ವರ ದೇವಾಲಕ್ಕೆ ಆಗಮಿಸುವ ೫೦೦ಕ್ಕೂ ಹೆಚ್ಚು ಭಕ್ತರಿಗೆ ರಕ್ಷೆಯನ್ನು ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬ ಕೇವಲ ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ಮಾತ್ರ ಬೆಸೆಯುವುದು ಮತ್ತು ರಕ್ಷಣೆ ಮಾತ್ರವಲ್ಲದೆ ಸಮಾಜದ ಎಲ್ಲಾ ಮಹಿಳೆಯರನ್ನು ಗೌರವದಿಂದ ಕಂಡು ಅವರಿಗೆ ರಕ್ಷಣೆ ನೀಡುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರ ಜವಾಬ್ದಾರಿ ಎಂದು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕದಂಬ ಸೇವಾ ಫೌಂಡೇಷನ್‌ನ ಕಾರ್ಯದರ್ಶಿ ಅನಿಲ್ ಕುಮಾರ್,ಖಜಾಂಚಿಗಳಾದ ಆರ್.ನಂದಿನಿ,ಸಂಘಟನಾ ಕಾರ್ಯದರ್ಶಿಗಳಾದ ಆಕಾಶ್ ಜಿ.ಆರ್ ಮತ್ತು ಲಕ್ಷ್ಮೀ ಎಸ್.,ಚಂದನ,ಸ್ಕೌಟ್ಸ್ ಬಾಬು,ಆನಂದ್ ಜೀವಿ,ಹೂವಳ್ಳಿ ನಾಗರಾಜ್, ಮತ್ತಿಕುಂಟೆ ಕೃಷ್ಣ, ಅಪ್ಪಿ ನಾರಾಯಣಸ್ವಾಮಿ,ಅರುಣಮ್ಮ,ಸವಿತಾ ಮತ್ತಿತತರು ಹಾಜರಿದ್ದರು.