ಪ್ರಾಸಿಕ್ಯೂಷನ್ ಕಾನೂನುಬಾಹಿರ: ಯತೀಂದ್ರ ಸಿದ್ದರಾಮಯ್ಯ
ಮೈಸೂರು: ಬಿಜೆಪಿ-ಜೆಡಿಎಸ್ ನಾಯಕರು ಜನರಿಂದ ಆಯ್ಕೆಯಾಗಿರುವ ಸರ್ಕಾರವನ್ನು ಆಧಾರ ರಹಿತ ಆರೋಪ ಮಾಡಿ ಅಸ್ಥಿರಗೊಳಿಸಿ ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿದ್ದಾರೆ. ಇದು ಬಹಳ ಅಪಾಯಕಾರಿ ಬೆಳವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಒಬ್ಬರ ವಿಚಾರವಲ್ಲ, ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲೂ ಇದೇ ರೀತಿ ರಾಜ್ಯಪಾಲರಿಗೆ ಖಾಸಗಿ ದೂರು ನೀಡಿ ಸರ್ಕಾರ ದುರ್ಬಲಗೊಳಿಸುವ ಪ್ರಯತ್ನವಾಗುತ್ತಿದೆ. ರಾಜ್ಯಪಾಲರು ಖಾಸಗಿ ದೂರಿನ ಆಧಾರದ ಮೇಲೆ ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಟ್ಟರೆ ಯಾವ ಸರ್ಕಾರಗಳೂ ಉಳಿಯುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕು. ಹೀಗಾಗಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಇದರ ವಿರುದ್ಧ ನಾವು ಕಾನೂನು ಮೂಲಕವೇ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ದೇಶದಲ್ಲಿ ಬಿಜೆಪಿ ಏಕಾಧಿಪತ್ಯ ಸಾಧಿಸಬೇಕು ಎಂದು ಹೊರಟಿದೆ. ಅದರ ವಿರುದ್ಧದ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ಕಾನೂನು ಮೂಲಕ ಮತ್ತು ರಾಜಕೀಯವಾಗಿ ಹಂತ ಹಂತವಾಗಿ ಹೋರಾಟ ಮಾಡುತ್ತೇವೆ. ಸಿದ್ದರಾಮಯ್ಯ ಈ ರಾಜ್ಯದ ದೊಡ್ಡ ನಾಯಕ. ಅವರನ್ನು ಬೀಳಿಸಿದರೆ ಕಾಂಗ್ರೆಸ್ ಪಕ್ಷ ಬೀಳಿಸಿದಂತೆ ಎಂಬ ಭ್ರಮೆಯಲ್ಲಿ ಬಿಜೆಪಿ-ಜೆಡಿಎಸ್ ಇದೆ. ಆದರೆ, ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ಕಾನೂನು ಬಾಹಿರ ಆರೋಪಕ್ಕೆ ಸಿದ್ದರಾಮಯ್ಯ ಹೆದರಿಕೊಂಡಿಲ್ಲ. ಅವರ ಧೈರ್ಯ ಇನ್ನೂ ಹೆಚ್ಚಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಕಾನೂನು ತಜ್ಞರೊಂದಿಗೆ ಚರ್ಚಿಸಿ ಹೋರಾಟಕ್ಕೆ ಸಜ್ಜಾಗಿದ್ದಾರೆ ಎಂದು ತಿಳಿಸಿದರು.
ನಮ್ಮ ತಂದೆ ಮಾಡಿರುವುದರಲ್ಲಿ ತಪ್ಪಿಲ್ಲ ಎಂಬುದು ನಮ್ಮ ತಾಯಿಯವರಿಗೂ ಗೊತ್ತಿದೆ. ಆದರೂ ನನ್ನ ವಿಚಾರದಲ್ಲಿ ಇವರ ಮೇಲೆ ಆರೋಪ ಬರುತ್ತಿದೆಯಲ್ಲಾ ಎಂಬ ಬೇಸರವೂ ಇದೆ. ಕಾನೂನು ಮೂಲಕ ಹೋರಾಟ ಮಾಡಿ ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ ಪರವಾಗಿ ಹೈಕಮಾಂಡ್‍ನಿಂದ ತಾಲ್ಲೂಕು ಮಟ್ಟದವರೆಗೂ ಕಾಂಗ್ರೆಸ್ ಪಕ್ಷ ಬೆಂಬಲಕ್ಕೆ ನಿಂತಿದೆ. ಸುಳ್ಳು ಆರೋಪ ಹೊರಿಸಿ ಸರ್ಕಾರ ಹತ್ತಿಕ್ಕಬೇಕು ಎಂದಾಗ ನಮ್ಮ ಒಗ್ಗಟ್ಟು ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಪಕ್ಷದ ಜತೆಗೆ ರಾಜ್ಯದ ಜನರು ಸಿದ್ದರಾಮಯ್ಯ ಅವರ ಪರ ನಿಂತಿದ್ದಾರೆ ಎಂದು ಹೇಳಿದರು.