ಚಿಕ್ಕಬಳ್ಳಾಪುರ: ಸಿದ್ದರಾಮಯ್ಯ ಪರ ಏರ್ಪಡಿಸಿದ್ದ ರ್‍ಯಾಲಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಗೈರು
ಚಿಕ್ಕಬಳ್ಳಾಪುರ : ಆ.20- ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಅವರು ಗೈರು ಹಾಜರಾಗಿದ್ದು ಕಾರ್ಯಕ್ರಮದಲ್ಲಿ ಗಮನಸೆಳೆದ ವಿಷಯವಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಾನೂನುಬಾಹಿರವಾಗಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾದ ಮೂಡ ಪ್ರಕರಣದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹಲೋಟ್ ರವರು ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಮೈತ್ರಿ ಪಕ್ಷದ ಕೈಗೊಂಬೆಯಂತೆ ವರ್ತಿಸಿ ಸಂವಿಧಾನ ಬಾಹಿರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಪ್ರಸಿಕ್ಯೂಷನ್ ಗೆ ಆದೇಶ ನೀಡಿರುವುದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಕಟುವಾಗಿ ಟೀಕಿಸಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರ ಹಿಂದುಳಿದ ಎಲ್ಲ ವರ್ಗಗಳ ಜನತೆಯ ಹಿತ ಕಾಯುವ ಹಾಗೂ ಉತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾವುದೇ ಕಾರಣಕ್ಕೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಬಾರದು ಎಂದು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾರಂಭಿಕವಾಗಿ ಬೆಳಗ್ಗೆ 11:00ಗೆ ಪ್ರಾರಂಭ ಆಗಬೇಕಾಗಿದ್ದ ಪ್ರತಿಭಟನ ಸಭೆ ಸುಮಾರು ಒಂದುವರೆ ಗಂಟೆ ತಡವಾಗಿ ಅಂದರೆ ಸುಮಾರು ಒಂದು ಗಂಟೆಗೆ ಆರಂಭಗೊಂಡಿತು ನಗರದ ರಾಷ್ಟ್ರೀಯ ಹೆದ್ದಾರಿ ಬಿ.ಬಿ. ರಸ್ತೆಯಲ್ಲಿರುವ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಅದೇ ರಾಷ್ಟ್ರೀಯ ಹೆದ್ದಾರಿ ಶಿಡ್ಲಘಟ್ಟ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಬೃಹತ್ ವೇದಿಕೆಯಲ್ಲಿ ವೇದಿಕೆ ಕಾರ್ಯಕ್ರಮ ಆರಂಭಗೊಂಡಿದ್ದು ಅತ್ಯಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಹಾಗು ಸಿದ್ದರಾಮಯ್ಯನವರ ಅಭಿಮಾನಿಗಳು ಈ ಪ್ರತಿಭಟನೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಹಾಗು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ರವರು ತಮ್ಮ ಭಾಷಣದುದ್ದಕ್ಕೂ ರಾಜ್ಯಪಾಲರನ್ನು ಟೀಕಿಸಿ ಅವರ ನಡೆ ಸಂವಿಧಾನ ವಿರೋಧವಾಗಿದ್ದು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದು ನ್ಯಾಯಾಲಯದಲ್ಲೂ ಸಹ ಈ ಬಗ್ಗೆ ಪ್ರಶ್ನಿಸಲಾಗುವುದು ಎಂದು ತಿಳಿಸಿದರು.
ರಾಜ್ಯಪಾಲ ತವರ್ ಚಂದ್ ಗೆಹಲೋಟ್ ರವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದರಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರವಾಗಿ ನಾನು ಒತ್ತಾಯಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎನ್. ಕೇಶವ ರೆಡ್ಡಿ ಮಾಜಿ ಸಚಿವ ವಿ.ಮನಿಯಪ್ಪ ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಆರ್ ಸೀತಾರಾಮ್ ಲೋಕಸಭೆ ಚುನಾವಣೆಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರಕ್ಷಾ ರಾಮಯ್ಯ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿಎಸ್ ರಫಿ ಉಲ್ಲಾ ನಗರಸಭೆ ಸದಸ್ಯರುಗಳಾದ ಕಾಂಗ್ರೆಸ್ ಪಕ್ಷದ ಅಂಬರೀಶ್ ಮತ್ತು ನರಸಿಂಹಮೂರ್ತಿ ಒಳಗೊಂಡಂತೆ ಜಿಲ್ಲೆಯ ಆರು ತಾಲೂಕುಗಳಿಂದ ಬಂದಿದ್ದ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಅಲ್ಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳು ಅನೇಕ ನಗರಸಭೆ ಸದಸ್ಯರುಗಳು ಮಹಿಳಾ ಕಾಂಗ್ರೆಸ್ ಸದಸ್ಯರುಗಳು ಕಾರ್ಯಕ್ರಮದಲ್ಲಿ ಆಜಾರಿದ್ದರು.
ಈ ಕಾರ್ಯಕ್ರಮದಲ್ಲಿ ಗಮನ ಸೆಳೆದ ಮತ್ತೊಂದು ಅಂಶವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅಭಿಮಾನಿಗಳು ಉದ್ದುದ್ದದ ಬಾವುಟಗಳನ್ನು ಹಿಡಿದು ಭಾಷಣಗಳ ನಡುವೆ ಸಿದ್ದರಾಮಯ್ಯರವರಿಗೆ ಜಯಕಾರ ಹಾಕುತ್ತಿದ್ದು ಗಮನ ಸೆಳೆಯಿತು.