ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಖಂಡನೀಯ
ಕೆಂಭಾವಿ:ಆ.19:ಕೋಲ್ಕೊತ್ತಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ದುಷ್ಕøತ್ಯವನ್ನು ಖಂಡಿಸಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ವೈದ್ಯ ಸಿಬ್ಬಂದಿ ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಿರೀಶ ಕುಲಕರ್ಣಿ, ವೈದ್ಯಕೀಯ ಸಿಬ್ಬಂದಿ ದಿನದ 24 ಗಂಟೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಸಾರ್ವಜನಿಕರ ಆರೋಗ್ಯ ಕಾಪಾಡುವದರಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಕೊರೊನಾ ಅಂತಹ ಸಾಂಕ್ರಾಮಿಕ ರೋಗ ಇಡೀ ಪ್ರಪಂಚವನ್ನೆ ಬಾಧಿಸಿದ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ವೈದ್ಯ ಸಿಬ್ಬಂದಿ ಶ್ರಮಿಸಿದ್ದಾರೆ. ಆದರೆ ಮೊನ್ನೆ ನಡೆದ ಘಟನೆ ಇಡೀ ಮನುಕುಲವೆ ತಲೆ ತಗ್ಗಿಸುವಂತಿದೆ. ಅಮಾನವೀಯ ಅತ್ಯಾಚಾರಚೆಸಗಿ, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ. ಇದು ಕಾನೂನಿನ ವೈಫಲ್ಯವನ್ನು ಎತ್ತಿ ತೊರಿಸುತ್ತದೆ.
ಇಂತಹ ಪ್ರಕರಣಗಳು ವೈದ್ಯಕೀಯ ಸಿಬ್ಬಂದಿಗಳ ಮನೋಸ್ಥೈರ್ಯ ಕುಗ್ಗಿಸುತ್ತವೆ. ಈ ಘಟನೆಯನ್ನು ವೈದ್ಯಾಧಿಕಾರಿ ಸಂಘ, ಆಯುಷ್ಯ ವೈದ್ಯಾಧಿಕಾರಿಗಳ ಸಂಘ ಹಾಗೂ ಇನ್ನಿತರೆ ವೈದ್ಯಕೀಯ ಸಿಬ್ಬಂದಿಗಳ ಸಂಘಗಳ ಗಂಭೀರವಾಗಿ ಖಂಡಿಸುತ್ತವೆ. ಮುಂದಿನ ದಿನಗಳಲ್ಲಿ ದೇಶದ ಯಾವದೇ ಮೂಲೆಯಲ್ಲಿಯೂ ಇಂತಹ ಘಟನೆಗಳು ಮರಕಳುಹಿಸದಿರಲಿ. ವೈದ್ಯಕೀಯ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಲಿ ಎಂದು ಹೇಳಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವಿಜಯಕುಮಾರ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಕಂದಾಯ ನಿರೀಕ್ಷಕ ರಾಜೇಸಾಬ, ಡಾ.ಬಸಂತಿ, ಡಾ.ಎಸ್.ಕೆ.ನ್ಯಾಮಗೊಂಡ, ಡಾ.ಸಂಧ್ಯಾ ಹಿರೇಮಠ, ಡಾ.ಚನ್ನಬಸಪ್ಪ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಎಲ್ಲ ವೈದ್ಯಕೀಯ ಸಿಬ್ಬಂದಿಗಳಿದ್ದರು.