ವಿದ್ಯಾರ್ಥಿಗಳಲ್ಲಿ ಕಲಿಕೆ ನಿರಂತರವಾಗಿರಲಿ
ಕಲಬುರಗಿ :ಆ.19: ವಿದ್ಯಾರ್ಥಿನಿಯರು ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ ಅವರು ಮೊದಲಿಗೆ ಹೆಣ್ಣು ಮಕ್ಕಳಿಗಾಗಿ ಶಾಲೆ ಆರಂಭಿಸಿದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಮನಗಂಡು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಮುನ್ನಡಿ ಹಾಡಿದರು. ಮುಂದೆ ಡಾ. ಶರಣಬಸವಪ್ಪ ಅಪ್ಪಾ ಅವರು ಹೆಣ್ಣು ಮಕ್ಕಳಿಗೆ ಅನೇಕ ಶಾಲಾ-ಕಾಲೇಜುಗಳು ತೆರೆದು ಅವರ ಭವಿಷ್ಯ ರೂಪಿಸಿಕೊಳ್ಳಲು ದಾರಿ ಮಾಡಿಕೊಟ್ಟರು. ಈ ಸಂಸ್ಥೆಯಲ್ಲಿ ಕಲಿತ ಸಾವಿರಾರು ಮಹಿಳೆಯರು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮಯ ವ್ಯರ್ಥ ಮಾಡದೆ ಓದಿನ ಕಡೆಗೆ ಹೆಚ್ಚು ಹೆಚ್ಚು ಸಮಯ ಕಳೆಯಬೇಕು. ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳನ್ನು ಓದಿ ತಿಳಿದುಕೊಳ್ಳಬೇಕು. ಯಾವ ವಿಷಯದಲ್ಲಿ ಹೆಚ್ಚು ಪರಿಣತಿ ಇರುವುದನ್ನು ನೋಡಿಕೊಂಡು ಆ ವಿಷಯದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು. ಸರಕಾರ, ವಿಶ್ವವಿದ್ಯಾಲಯಗಳು ಮಾಡದ ಕೆಲಸಗಳನ್ನು ಪೂಜ್ಯ ಡಾ.ಅಪ್ಪಾಜಿ ಮತ್ತು ಡಾ.ಅವ್ವಾಜಿಯವರು ಮಾಡುತ್ತಿದ್ದಾರೆ ಎಂದರು.
ಕಾರ್ಯÀಕ್ರಮದ ಮುಖ್ಯಅತಿಥಿಗಳಾದ ನಿವೃತ್ತ ಪ್ರಾಚಾರ್ಯೆ ಡಾ.ನಿಂಗಮ್ಮ ಪತಂಗೆ ಮಾತನಾಡಿ, ವಿದ್ಯಾರ್ಥಿಗಳು ಧ್ಯೆರ್ಯದಿಂದ ಎಲ್ಲದರಲ್ಲೂ ಮುನ್ನುಗ್ಗಬೇಕು. ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ಗುರುಗಳ ಮಾರ್ಗದರ್ಶನದಿಂದ ಭವಿಷ್ಯ ಉಜ್ವಲಗೊಳಿಸಿಕೊಳ್ಳುವುದಕ್ಕೆ ಸತತ ಪ್ರಯತ್ನ ಮಾಡಬೇಕು. ಶರಣಬಸವೇಶ್ವರ ಸಂಸ್ಥಾನದಲ್ಲಿ ಸಾಮಾನ್ಯರಿಗೂ ಓದುವ ಅವಕಾಶವನ್ನು ಪೂಜ್ಯ ಡಾ.ಅಪ್ಪಾಜಿ ಮತ್ತು ಡಾ.ಅವ್ವಾಜಿಯವರು ಕಲ್ಪಿಸಿಕೊಡುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣ ಕಲಿಯಬೇಕೆಂಬ ಮಹಾದಾಸೆ ಅವರಲ್ಲಿದೆ. ಎಂಥ ಕಷ್ಟಗಳು ಬಂದರೂ ಧೈರ್ಯದಿಂದ ಎದುರಿಸಿ ಸವಾಲಾಗಿ ಸ್ವೀಕರಿಸಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಪ್ರತಿಯೊಬ್ಬರಲ್ಲೂ ಎಲ್ಲವನ್ನು ಸಾಧಿಸುವ ಗುಣ ಇರುತ್ತದೆ ಅದನ್ನು ಹೊರ ತರುವ ಪ್ರಯತ್ನ ಮಾಡಬೇಕು. ಕಷ್ಟದ ಫಲವಾಗಿಯೇ ದೊಡ್ಡ ದೊಡ್ಡ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆ ಮೇಲೆ ಶರಣಬಸವೇಶ್ವರ ದೇವಸ್ಥಾನ ಆವರಣದ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ, ಕಲಾವಾಣಿ ವಿದ್ಯಾರ್ಥಿ ಸಂಘದ ಸಲಹೆಗಾರಾದ ಡಾ.ಸೀಮಾ ಪಾಟೀಲ, ಸಹ ಸಲಹೆಗಾರರಾದ ಶ್ರೀಮತಿ ಸಂತೋಷಿ ಹಿಪ್ಪರಗಿ, ಮುಕ್ತಾಂಬಿಕಾ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಂ.ಆರ್.ಹುಗ್ಗಿ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸುರೇಶಕುಮಾರ ನಂದಗಾಂವ, ವಿದ್ಯಾರ್ಥಿನಿಯರು ಇದ್ದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯಕ್ಕೆ ಈ ಸಾಲಿನಲ್ಲಿ ನಡೆಸಿದ ಅಂತಿಮ ವರ್ಷದ ಪದವಿ ಕಲಾ ವಿಭಾಗದಲ್ಲಿ 5ನೇ ರ್ಯಾಂಕ ಪಡೆದ ಮಹಾವಿದ್ಯಾಲಯ ವಿದ್ಯಾರ್ಥಿನಿ ಕು.ನಯನಾ ಮಾನ್ಸ ಮತ್ತು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ಕು.ವೈಷ್ಣವಿ ಮತ್ತು ಸಿಂಗಪೂರದಲ್ಲಿ ನಡೆಯಯವ ಅಂತರ್‍ವಿಶ್ವವಿದ್ಯಾಲಯ ಕರಾಟೆ ಸ್ಫರ್ಧೆಗೆ ಆಯ್ಕೆಯಾದ ವಿದ್ಯಾರ್ಥಿನಿ ಕು.ದಾಮಿನಿಯನ್ನು ಸನ್ಮಾನಿಸಲಾಯಿತು.
ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿ ಪಡೆದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ , ಪ್ರಾಧ್ಯಾಪಕರಾದ ಡಾ.ಶಾಂತಲಿಂಗ ಘಂಟೆ, ಶ್ರೀಮತಿ ದಾಕ್ಷಾಯಣಿ ಕಾಡಾದಿ ಮತ್ತು ಶ್ರೀಮತಿ ಪದ್ಮಜಾ ವೀರಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.