ಗಡಿ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ:ಸಚಿವ ಶಿವರಾಜ ತಂಗಡಗಿ ಭರವಸೆ
ವಿಜಯಪುರ,ಅ.1: ರಾಜ್ಯದ 742 ಗ್ರಾಮಗಳಲ್ಲಿ ವಾಸಿಸುವ ಕನ್ನಡಿಗರ ಸಮಸ್ಯೆ ನಮ್ಮ ಸಮಸ್ಯೆ. ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿ, ಕನ್ನಡಿಗರು ವಾಸಿಸುವ ಗ್ರಾಮಗಳಲ್ಲಿ ಅಗತ್ಯವಿರುವ ರಸ್ತೆ, ನೀರು, ಬಸ್ ಸೌಕರ್ಯ, ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಖಾತೆ ಸಚಿವ ಶಿವರಾಜ್ ತಂಗಡಗಿ ಅವರು ಭರವಸೆ ನೀಡಿದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾಡಳಿತ ವಿಜಯಪುರ, ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದಲ್ಲಿ ಸೋಮವಾರ ಹಮ್ಮಿಕೊಂಡ ಕರ್ನಾಟಕ ಸಂಭ್ರಮ-50, ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಕರ್ನಾಟಕ ಗಡಿ ಪ್ರಾಧಿಕಾರದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಇಂತಹ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದಕ್ಕೂ ಮುನ್ನ ಸಾಹಿತಿಗಳು ತಮ್ಮ ವಿಚಾರಗಳನ್ನು ಅಭಿವ್ಯಕ್ತಪಡಿಸಲು ಮುಕ್ತ ಅವಕಾಶವನ್ನು ನೀಡಿ ಮೈಸೂರಿನಲ್ಲಿ ಸಾಹಿತಿಗಳ ಚಿಂತನಾ ಸಮಾವೇಶ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಸ್ಪರ ಅನ್ಯೋನ್ಯ, ಪ್ರೀತಿ, ವಿಶ್ವಾಸ ಬೆಳೆಸಿ, ಉಭಯ ರಾಜ್ಯದ ಜನರು ಸಾಮರಸ್ಯದಿಂದ ಬದುಕಲು ಗಡಿಭಾಗದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಗಡಿ ಭಾಗದಲ್ಲಿರುವ ಪ್ರತಿಯೊಬ್ಬ ಕನ್ನಡಿಗರ ಸಮಸ್ಯೆಗಳಿಗೆ ಸರ್ಕಾರ ನಿರಂತರವಾಗಿ ಸ್ಪಂದಿಸುತ್ತಲಿದ್ದು, ಗಡಿಭಾಗದ ಜನರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಕರ್ನಾಟಕ ಸರ್ಕಾರ ಪ್ರಯತ್ನಿಸಿಲಿದೆ. ನಾನು ಸಹ ಗಡಿ ಭಾಗದ ಜನರ ಸಮಸ್ಯೆಗಳನ್ನು ಪರಿಶೀಲಿಸಿ, ಅವರಿಗೆ ದೊರಕಿಸಬಹುದಾದ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಶಿಕ್ಷಣ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯ ದೊರಕಿಸಲು ಈ ಭಾಗದ ಜನರ ಸಮಸ್ಯೆಗಳ ವರದಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.
ನಾನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವನಾದ ಮೇಲೆ ಗಡಿ ಭಾಗದ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದಲ್ಲಿ ಇಂತಹ ಅದ್ಭುತ ಸಾಮರಸ್ಯದ ಪ್ರತೀಕವಾದ ಕನ್ನಡ ಸಮಾವೇಶ ಹಮ್ಮಿಕೊಂಡಿರುವುದು ಅತೀವ ಸಂತಸ ತಂದಿದೆ. ಗುಡ್ಡಾಪುರ ದಾನಮ್ಮ ದೇವಸ್ಥಾನಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ಜನರು ಬರುವುದರಿಂದ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಗತ್ಯ ಅನುದಾನವನ್ನು ನಮ್ಮ ಸರ್ಕಾರದಿಂದ ಒದಗಿಸಲಾಗುವುದು. ಈ ಹಿಂದೆ ಹಲವಾರು ಪ್ರಶಸ್ತಿಗಳನ್ನು ನೀಡಿದ್ದರೂ ಸಹ ಈ ಐತಿಹಾಸಿಕ ಸಮಾವೇಶದಲ್ಲಿ, ಕನ್ನಡ ನಾಡು-ನುಡಿ, ಸಂಸ್ಕøತಿ, ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ, ಕನ್ನಡ ಭಾಷೆ ಅಳಿವು-ಉಳಿವಿಗಾಗಿ ಶ್ರಮಿಸಿದ ಮಹಾನ್ ಗಡಿನಾಡ ಚೇತನರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ-50 ವರ್ಷ ಹಿನ್ನೆಲೆಯಲ್ಲಿ ಬರುವ ನವೆಂಬರ್ 1 ರಂದು 69 ಜನರಿಗೆ ರಾಜ್ಯ ಪ್ರಶಸ್ತಿ ನೀಡಿ, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಡಿನ ಸಾಂಸ್ಕøತಿಕ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಮಹಾರಾಷ್ಟ್ರ ಕನ್ನಡಿಗರಿಂದ ಬೇಡಿಕೆಗಳನ್ನು ಸಲ್ಲಿಸಿ, ಉದ್ಯೋಗದಲ್ಲಿ ಭದ್ರತೆ, ಅಂಗನವಾಡಿಗಳಲ್ಲಿ ಕನ್ನಡ ಆದ್ಯತೆ, ಸರ್ಕಾರಿ ಪ್ರೌಢಶಾಲೆ ಆರಂಭ, ಗಡಿ ಭಾಗದ-ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ, ಕನ್ನಡದಲ್ಲಿ ಟಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಮಹಾರಾಷ್ಟ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು, ಕನ್ನಡ ಶಾಲೆಗಳಿಗೆ ಕನ್ನಡ ಸಾಹಿತ್ಯಿಕ ಪುಸ್ತಕಗಳು, ಪರಿಕರಗಳನ್ನು ಒದಗಿಸುವುದು, ಮಹಾರಾಷ್ಟ್ರ ರಾಜ್ಯದ ವಿವಿಧ ನಗರಗಳಲ್ಲಿ ಕನ್ನಡ ಭವನ ನಿರ್ಮಾಣ, ನವೋದಯ, ಮೊರಾರ್ಜಿ ಶಾಲೆಗಳಲ್ಲಿ ಗಡಿ ಕನ್ನಡಿಗರ ಪ್ರವೇಶಕ್ಕೆ ಆದ್ಯತೆ, ಉಚಿತ ಸಾರಿಗೆ ಸೌಕರ್ಯ ಸೇರಿದಂತೆ ಗಡಿನಾಡಿನಲ್ಲಿ ಕನ್ನಡ, ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಪ್ರೋತ್ಸಾಹಿಸಲು ಸಚಿವರಿಗೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಈ ಎಲ್ಲ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಜವಳಿ, ಕಬ್ಬು ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವÀ ಶಿವಾನಂದ ಪಾಟೀಲ ಅವರು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಾಕ್ಷ್ಯಚಿತ್ರಕ್ಕೆ ಚಾಲನೆ ನೀಡಿ, ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಅವರು, ಬಹಳ ದಿನಗಳ ನಂತರ ಗಡಿಭಾಗದಲ್ಲಿ ಇಂತಹ ಸಾಮರಸ್ಯ ಮೂಡಿಸುವ ಐತಿಹಾಸಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಭಾಷೆ ಬೇರೆ-ಬೇರೆಯಾಗಿದ್ದರೂ ಸಹ ಮನಸ್ಸು ಒಂದೇ ಆಗಿದೆ. ಪ್ರತಿಯೊಬ್ಬರು ನಾವು ಭಾರತೀಯರು ಎಂಬ ಸಂದೇಶ ಸಾರಬೇಕು ಎಂದು ಹೇಳಿದರು.
ಕನ್ನಡಿಗರು ಸೊಲ್ಲಾಪುರ, ಸಾಂಗಲಿ ಸೇರಿದಂತೆ ದೇಶದ ಯಾವ ಮೂಲೆಯಲ್ಲಾದರೂ ವಾಸಿಸಿದರೂ ಕನ್ನಡಿಗರ ಸಮಸ್ಯೆಗಳಿಗೆ ನಮ್ಮ ಸರ್ಕಾರ ಸದಾ ಸ್ಪಂದಿಸಲಿದೆ. ಕರ್ನಾಟಕ-ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳು ಒಂದಾಗಿ ಪರಸ್ಪರ ಸಮನ್ವಯತೆಯಿಂದ ನಿರ್ಧಾರ ಕೈಗೊಂಡು ಕೃಷ್ಣಾ ನೀರನ್ನು ಬಳಕೆ ಮಾಡಿಕೊಂಡಲ್ಲಿ ಐತಿಹಾಸಿಕವಾಗಲಿದೆ. ಇಡೀ ದೇಶಕ್ಕೆ ಮಾದರಿಯಾಗಲಿದೆ. ಪ್ರತಿ ವರ್ಷÀ 300 ರಿಂದ 500 ಟಿಎಂಸಿ ಸಮುದ್ರ ಪಾಲಾಗುವ ನೀರು ಬಳಕೆಮಾಡಿಕೊಂಡಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾದಂತಾಗುತ್ತದೆ. ಈ ನಿಟ್ಟಿನಲ್ಲಿ ಮೂರು ಸರ್ಕಾರಗಳು ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಸಾಂಗಲಿ ಜಿಲ್ಲೆಯ ಜತ್ತ ಶಾಸಕ ವಿಕ್ರಮಸಿಂಹ ಬಾಳಾಸಾಹೇಬ ಸಾವಂತ ಮಾತನಾಡಿದರು.
ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾವೇಶದಲ್ಲಿ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ನಲಿ-ಕಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದಿಂದ ಹೊರ ತಂದಿರುವ ಗಡಿಯಲ್ಲಿ ಭಾಷಾ ಸಾಮರಸ್ಯ ಪುಸ್ತಕ ಬಿಡುಗಡೆ ಮಾಡಲಾಯಿತು. 2023-24ನೇ ಸಾಲಿನ ಹಾಗೂ 2024-25ನೇ ಸಾಲಿನ ಗಡಿ ಪ್ರಾಧಿಕಾರದಿಂದ ನೀಡುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ದಾನಮ್ಮದೇವಿ ಟ್ರಸ್ಟ್‍ನ ಅಧ್ಯಕ್ಷ ವಿಜುಗೌಡ ಪಾಟೀಲ, ಎಂ.ಎಸ್.ಮದಭಾವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಸೇರಿದಂತೆ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರು, ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರಾದ ಧರಣಿದೇವಿ ಮಾಲಗತ್ತಿ ಸ್ವಾಗತಿಸಿದರು.