ರಾಜ್ಯದಲ್ಲಿ ಮಳೆ ಅಬ್ಬರ
ಬೆಂಗಳೂರು,ಅ,೬-ರಾಜ್ಯದಲ್ಲಿ ಹಲವು ದಿನಗಳಿಂದ ಬಿಡುವುಕೊಟ್ಟಿದ್ದ ಮಳೆ ಮತ್ತೆ ಅಬ್ಬರಿಸಿದ್ದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಿನ್ನೆ ಸುರಿದ ಮಳೆಗೆ ಜನ ತತ್ತರಿಸಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ದಾವಣಗೆರೆಯಲ್ಲಿ ಮನೆ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ರಸ್ತೆಗಳ ಮೇಲೂ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕೆಲವೆಡೆ ಮನೆಗಳ ಕಾಂಪೌಂಡ್ ಗೋಡೆಗಳು ಕುಸಿದಿದ್ದು, ಜನ ತೊಂದರೆಗೆ ಸಿಲುಕಿದ್ದಾರೆ.
ಬಯಲುಸೀಮೆ, ಮಲೆನಾಡು ಭಾಗದಲ್ಲೂ ಮಳೆಯಾಗುತ್ತಿದ್ದು, ಮುಂದಿನ ೪ ದಿನ ಮಳೆ ಹೆಚ್ಚಾಗುವ ನಿರೀಕ್ಷೆ ಇದ್ದು, ರಾಜ್ಯದ ೧೨ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ದಾವಣಗೆರೆಯ ಚೆನ್ನಗಿರಿ ತಾಲ್ಲೂಕಿನ ಸಂತೆ ಬೆನ್ನೂರಿನಲ್ಲಿ ಮನೆ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಕುಳಗಟ್ಟೆ ಬಸವರಾಜಪ್ಪ (೮೧) ಎಂದು ಗುರುತಿಸಲಾಗಿದ್ದು, ಮಳೆಯಿಂದ ಮನೆ ಒಂದು ಕಡೆ ವಾಲುತ್ತಿದುದ್ದನ್ನು ಗಮನಿಸಿ ಬಸವರಾಜಪ್ಪ ಹಾಗೂ ಆತನ ಮಗ-ಸೊಸೆ ಮನೆಯಿಂದ ಹೊರ ಬಂದಿದ್ದು, ಬಸವರಾಜಪ್ಪ ಮನೆಯಿಂದ ಹೊರ ಬರುವ ಸಮಯದಲ್ಲಿ ಮನೆಯ ಗೋಡೆ ಕುಸಿದು ಇವರು ಅದರಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಂತೂ ಮಳೆಯಿಂದ ತಗ್ಗು ಪ್ರದೇಶದಲ್ಲಿನ ಜನ ತೊಂದರೆಗ ಸಿಲುಕಿ, ಜಲದಿಗ್ಭಂದನಕ್ಕೆ ಒಳಗಾಗಿದ್ದು, ಕೆಲ ಪ್ರದೇಶಗಳಲ್ಲಿ ನೀರು ತುಂಬಿದ್ದರಿಂದ ಜನ ನಿದ್ರೆ ಇಲ್ಲದೆ ರಾತ್ರಿ ಕಳೆದಿದ್ದಾರೆ. ಮನೆಗೆ ನುಗ್ಗಿರುವ ನೀರನ್ನು ಹೊರ ಹಾಕುವ ಕೆಲಸವನ್ನು ಮಾಡಿದ್ದು ಮಳೆಯಿಂದ ಜನ ಹೈರಾಣಾರಾಗಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸರಾಸರಿ ೧೬ ಮಿ.ಮೀ ಮಳೆಯಾಗಿದ್ದು, ಮಳೆಯ ಅಬ್ಬರಕ್ಕೆ ಜನ ತತ್ತರಿಸಿದರು. ಹಲವೆಡೆ ದೊಡ್ಡ ದೊಡ್ಡ ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದೆ.ಕಾಂಪೌಂಡ್ ಗೋಡೆಗಳು ಕುಸಿದಿವೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ಬೆಂಗಳೂರಿನ ಬಿನ್ನಿಪೇಟೆ, ಯಲಹಂಕ,ಬಸವೇಶ್ವರ ನಗರ, ಪುಟ್ಟೇನಹಳ್ಳಿ, ಟಿ. ದಾಸರಹಳ್ಳಿ, ಸರ್ಜಾಪುರ ಮುಖ್ಯರಸ್ತೆ ಸೇರಿದಂತೆ ಹಲವೆಡೆ ಮಳೆಯಿಂದ ಜನ ತೊಂದರೆಗೆ ಸಿಲುಕಿದ್ದು, ಬಿನ್ನಿಪೇಟೆಯಲ್ಲಿ ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಗೋಡೆ ಕುಸಿದು ವಿದ್ಯುತ್ ಕಂಬ ಸಹ ವಾಲಿದೆ.
ಇದರಿಂದ ನಿವಾಸಿಗಳು ಹೊರ ಬರದ ಸ್ಥಿತಿಯಲ್ಲಿ ಸಿಲುಕಿದ್ದು, ಅವರನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ, ಕಾಂಪೌಂಡ್ ಕುಸಿತದಿಂದ ಹಲವು ಬೈಕ್, ಕಾರುಗಳು ಜಖಂ ಆಗಿದೆ.
ಬಸವೇಶ್ವರ ನಗರದಲ್ಲಿ ಮಳೆಯಿಂದ ವೃದ್ಧಾಶ್ರಮಕ್ಕೆ ನೀರು ನುಗ್ಗಿ ವೃದ್ಧಾಶ್ರಮದಲ್ಲಿದ್ದ ವೃದ್ಧರು ಸಂಕಷ್ಟಕ್ಕೆ ಸಿಲುಕಿದ್ದರು. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡಿದರು.
ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ೪೯ ಪ್ರದೇಶಗಳಲ್ಲಿ ಮಳೆಹಾನಿಯಾಗಿದೆ. ೪೯ ಪ್ರದೇಶಗಳು ೩ಕ್ಕೂ ಹೆಚ್ಚು ಪ್ರದೇಶಗಳಲ್ಲಿ ೧೦೦ಕ್ಕೂ ಹೆಚ್ಚು ಮಿಲಿ ಮೀಟರ್ ಮಳೆಯಾಗಿದೆ. ಬಸವೇಶ್ವರ ನಗರದಲ್ಲಿ ೧೦೯.೫೦ ಮಿಮೀ, ನಾಗಪುರದಲ್ಲಿ ೧೦೪ ಮಿಮೀ ಹಾಗೂ ಹಂಪಿನಗರದಲ್ಲಿ ೧೦೨ ಮಿಮೀ ಮಳೆ, ಭಾರೀ ಅವಾಂತರ ಸೃಷ್ಟಿಸಿದೆ.
ಹಲವೆಡೆ ಅನಾಹುತ:
ಸುರಿದ ಧಾರಾಕಾರ ಮಳೆಗೆ ಭಾರೀ ಅನಾಹುತವನ್ನುಂಟು ಮಾಡಿದೆ. ನಗರದ ಬಿನ್ನಿಪೇಟೆಯಲ್ಲಿ ಕಾಂಪೌಡ್ ಕುಸಿದಿದ್ದು, ಹತ್ತಾರು ಗಾಡಿಗಳು ಜಖಂಗೊಂಡಿವೆ. ೪೫ ಮನೆಗಳಿಗೆ ನುಗ್ಗಿದೆ. ಕಾಂಪೌಡ್ ನೀರು ಕುಸಿತದ ಪರಿಣಾಮ ೧೬ ಮನೆಗಳಿಗೆ ಜಲದಿಗ್ಭಂಧನ ಉಂಟಾಗಿದೆ.
ಮತ್ತೊಂದೆಡೆ ಕೆ.ಆರ್ ಮಾರುಕಟ್ಟೆಯ ರಸ್ತೆಯಲ್ಲಾ ಜಲಾವೃತ್ತವಾಗಿತ್ತು. ಮಂಡಿವರೆಗೆ ಮಳೆ ನೀರು ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಯಾಂಕಿ ರಸ್ತೆಯಲ್ಲಿ ನೀರು ನಿಂತು ಅಕ್ಷರಶಃ ಜನರು ನಲುಗಿ ಹೋಗಿದ್ದರು.
ಟ್ರಾಫಿಕ್ ಜಾಮ್ ಸಮಸ್ಯೆ:
ಒಂದೆಡೆ ಮಳೆ. ಮತ್ತೊಂದೆಡೆ ಟ್ರಾಫಿಕ್ ಜಾಮ್.ಸಮಸ್ಯೆ ಏಕಕಾಲಕ್ಕೆ ಸಂಭವಿಸಿತ್ತು. ಬಳ್ಳಾರಿ ರಸ್ತೆ ಮಾರ್ಗ ಮಳೆಯಿಂದಾಗಿ ಸ್ಥಬ್ದವಾಗಿತ್ತು. ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರ ಪರಿಸ್ಥಿತಿ ಹೇಳತೀರದಾಗಿತ್ತು. ಈ ನಡುವೆ ಟೌನ್ ಹಾಲ್, ಕಾರ್ಪೊರೇಷನ್ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದವು.
ಮುಂದಿನ ದಿನಗಳಲ್ಲಿ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು ನಗರ, ಗ್ರಾಮಾಂತರ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಅ.೧೦ ಭಾರೀ ಮಳೆಯಾಗಬಹುದು. ಮುಂದಿನ ನಾಲ್ಕೈದು ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನ ಮೂರು ಕಡೆ ಹಾಗೂ ರಾಮನಗರ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದೆ. ರಾಮನಗರದಲ್ಲಿ ೧೧೦ ಮಿ.ಮೀ, ಬಸವೇಶ್ವರ ನಗರದಲ್ಲಿ ೧೦೯.೫೦ ಮಿಮೀ, ನಾಗಪುರದಲ್ಲಿ ೧೦೪ ಮಿಮೀ ಹಾಗೂ ಹಂಪಿನಗರದಲ್ಲಿ ೧೦೨ ಮಿಮೀ ಮಳೆ, ಭಾರೀ ಅವಾಂತರ ಸೃಷ್ಟಿಸಿದೆ. ಸಂಚಾರ ದಟ್ಟಣೆಯಿಂದ ಜನರು ಸಮಸ್ಯೆಗೆ ಸಿಲುಕುವಂತಾಗಿತ್ತು. ಅಲ್ಲೆಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಜನರು ಪರದಾಡುವಂತಾಯಿತು.
ಬೆಂಗಳೂರು ನಗರದಲ್ಲಿ ೧೧೩ ಮಿ.ಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ೭೪ ಮಿ.ಮೀರಾಮನಗರ ೧೧೦ ಮಿ.ಮೀ
ಮಂಡ್ಯದಲ್ಲಿ ೮೭ ಮಿ.ಮೀ,ಕೋಲಾರದಲ್ಲಿ ೮೪ ಮಿ.ಮೀ,ಉಡುಪಿದಲ್ಲಿ ೬೯ ಮಿ.ಮೀ, ಧಾರವಾಡದಲ್ಲಿ ೬೭ ಮಿ.ಮೀ,ದಕ್ಷಿಣ ಕನ್ನಡದಲ್ಲಿ ೬೬ ಮಿ.ಮೀ, ಚಾಮರಾಜನಗರದಲ್ಲಿ ೬೬ ಮಿ.ಮೀ ಮಳೆಯಾಗಿದೆ.
ಉಳಿದಂತೆ ತುಮಕೂರಿನಲ್ಲಿ ೬೫ ಮಿ.ಮೀ ಗದಗದಲ್ಲಿ ೬೩ ಮಿ.ಮೀ,ಹಾಸನದಲ್ಲಿ ೬೪ ಮಿ.ಮೀ,ಕೊಡಗಿನಲ್ಲಿ ೭೭ ಮಿ.ಮೀ, ಬೆಳಗಾವಿಯಲ್ಲಿ ೫೯ ಮಿ.ಮೀ, ಹಾವೇರಿಯಲ್ಲಿ ೫೨ ಮಿ.ಮೀ, ಉತ್ತರ ಕನ್ನಡದಲ್ಲಿ ೪೭ ಮಿ.ಮೀ,ಮೈಸೂರಿನಲ್ಲಿ ೪೪ ಮಿ.ಮೀ, ವಿಜಯನಗರದಲ್ಲಿ ೪೦ ಮಿ.ಮೀ, ಚಿಕ್ಕಮಗಳೂರಿನಲ್ಲಿ ೩೩ ಮಿ.ಮೀ,ಬೀದರ್ ನಲ್ಲಿ ೩೦ ಮಿ.ಮೀ, ಕೊಪ್ಪಳದಲ್ಲಿ ೨೪ ಮಿ.ಮೀ ವಿಜಯಪುರದಲ್ಲಿ ೨೦ ಮಿ.ಮೀ ಹಾಗು ವಿಜಯನಗರದಲ್ಲಿ ೨೦ ಮಿ.ಮೀ ಮಳೆಯಾಗಿದ್ದು ಹಲವೆಡೆ ತೊಂದರೆ ಎದುರಿಸುವಂತಾಯಿತು
