ಭಾರಿ ಮಳೆ, ಮುನ್ಸೂಚನೆ ಹಳದಿ ಅಲರ್ಟ್
ಬೆಂಗಳೂರು,ಅ.೬- ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾಗಲಿದ್ದು, ೧೧ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ೧೧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರ, ಗ್ರಾಮಾಂತರ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಏ.೧೦ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇನ್ನು ನಾಲ್ಕೈದು ದಿನಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ನಗರದ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ತಡೆಗೋಡೆ ಕುಸಿದು ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದೆ. ಸರಾಸರಿ ೩೬ ಮಿ.ಮೀ ಮಳೆ ದಾಖಲಾಗಿದೆ, ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಭಾರೀ ಅನಾಹುತ ಸಂಭವಿಸಿದೆ. ನಗರದ ಬಿನ್ನಿಪೇಟೆಯಲ್ಲಿ ಕಾಂಪೌಂಡ್ ಕುಸಿದು ಹತ್ತಾರು ಗಾಡಿಗಳಿಗೆ ಹಾನಿಯಾಗಿದೆ. ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ಕಾಂಪೌಂಡ್ ಕುಸಿದ ಪರಿಣಾಮ ೧೬ ಮನೆಗಳು ಜಖಂಗೊಂಡಿವೆ.
ಕೆ.ಆರ್. ನಿರಂತರ ಮಳೆಯಿಂದಾಗಿ. ಇಡೀ ಮಾರುಕಟ್ಟೆ ರಸ್ತೆ ಜಲಾವೃತವಾಗಿತ್ತು. ಮಳೆ ನೀರು ಮೊಣಕಾಲಿನವರೆಗೂ ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಯಾಂಕಿ ರಸ್ತೆಯಲ್ಲಿ ನೀರು ನಿಂತಿದ್ದು, ಜನರು ಅಕ್ಷರಶಃ ನೀರಲಿ ಮುಳುಗಿದ್ದಾರೆ. ವಾಹನ ಸವಾರರು ಪರದಾಡಿದ್ದಾರೆ.
ಒಂದೆಡೆ ಮಳೆ, ಇನ್ನೊಂದೆಡೆ ಟ್ರಾಫಿಕ್ ಜಾಮ್. ಮಳೆಯಿಂದಾಗಿ ಬಳ್ಳಾರಿ ರಸ್ತೆ ಸ್ಥಗಿತಗೊಂಡಿದೆ. ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಮಲ್ಲೇಶ್ವರಂ ೧೭ನೇ ಕ್ರಾಸ್ ಕ್ಲೌಡ್ ನೈನ್ ಆಸ್ಪತ್ರೆಯ ಮುಂಭಾಗದಲ್ಲಿ ಬೃಹತ್ ಮರವೊಂದು ಬಿದ್ದಿದೆ. ಮರಗಳ ಕೆಳಗೆ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ., ರಸ್ತೆ ಸಂಚಾರ ಸ್ಥಗಿತಗೊಂಡಿದೆ.