ನಮ್ಮದು ರೈತ ಪರ ಸರ್ಕಾರ: ಎನ್ ಚಲುವರಾಯಸ್ವಾಮಿ
ಸಂಜೆವಾಣಿ ನ್ಯೂಸ್
ಮೈಸೂರು:ಅ.5:- ನಮ್ಮದು ಜನಸಾಮಾನ್ಯರ , ರೈತರ ಪರ ಸರ್ಕಾರ. ಕೃಷಿ ಕ್ಷೇತ್ರದ ಸುಧಾರಣೆಗೆ ಅತೀ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮೈಸೂರಿನ ಜಿ.ಕೆ ಮೈದಾನದಲ್ಲಿ ಏರ್ಪಡಿಸಿರುವ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಲಾಭದಾಯಕ ಆಗಿಸುವುದೇ ರಾಜ್ಯ ಸರ್ಕಾರದ ಧ್ಯೇಯ ಅದಕ್ಕಾಗಿ ಕೃಷಿ ,ಪಶುಸಂಗೋಪನೆ, ತೋಟಗಾರಿಗೆ ರೇಷ್ಮೆ ಎಲ್ಲವನ್ನೂ ಒಟ್ಟುಗೂಡಿಸಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಕೃಷಿಕರ ಆದಾಯದಲ್ಲಿ ವೃದ್ಧಿಯಾಗಬೇಕು ವೈಜ್ಞಾನಿಕ ಬೆಲೆ ದೊರೆಯುವ ಜೊತೆಗೆ ಸರ್ವ ಋತು ವರಮಾನ ಬರುವಂತೆ ಬೇಸಾಯ ಪದ್ಧತಿ ಅಳವಡಿಕೆಯಾಗಬೇಕು. ಕೃಷಿಕರು ಸಮಗ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು. ಹೈನುಗಾರಿಕೆ ಕುರಿ, ಕೋಳಿ, ಹಂದಿ, ಮೀನು, ಜೇನು ಸಾಕಾಣಿಕೆಗಳ ಬಗ್ಗೆಯೂ ಗಮನ ಹರಿಸಬೇಕು ಆಗ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.
ಕೃಷಿ ಯಾಂತ್ರೀಕರಣದ ಪರಿಣಾಮಕಾರಿ ಅಳವಡಿಕೆ ಅಗತ್ಯ ಕೃಷಿ ಇಲಾಖೆ ವತಿಯಿಂದ ಕಳೆದ ಸಾಲಿನಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿದೆ. ಕೃಷಿಕರು ಸಾಂಪ್ರಾದಾಯಿಕ ಕೃಷಿ ಜೊತೆಗೆ ಸಮಗ್ರ ಬೇಸಾಯಕ್ಕೆ ಒತ್ತು ನೀಡಬೇಕು, ಬದಲಾಗುತ್ತಿರುವ ತಂತ್ರಜ್ಞಾನ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಉತ್ಪಾದನೆಯ ಮೌಲ್ಯವರ್ಧನೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬೇಕು ಎಂದು ಕಿವಿಮಾತು ಹೇಳಿದರು.
ದಸರಾ ನಮ್ಮ ಭವ್ಯ ಪರಂಪರೆಯ ಸಂಕೇತ, ನಮ್ಮ ಶ್ರೀಮಂತ ಸಂಸ್ಕೃತಿಯ ಪ್ರತೀಕ. ಇದು, ನಾಡಿನ ಅದಿದೇವತೆ ಚಾಮುಂಡೇಶ್ವರಿಯ ಆರಾಧನೆಯ ಪರ್ವಕಾಲ, ತಾಯಿ ಚಾಮುಂಡೇಶ್ವರಿ ನಾಡಿನ ಎಲ್ಲರಿಗೂ ಒಳಿತು ಮಾಡು ಎಂದು ನಾನು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದರು.
ಮೈಸೂರು ದಸರಾ ಎಂದರೆ ಅದೊಂದು ವಿಸ್ಮಯ, ಸಂಭ್ರಮ, ಇದು ನಾಡಿನ ಮನೆ ಮನೆ ಹಬ್ಬ. ಶತ ಶತಮಾನಗಳಿಂದ ರಾಜ ಪರಂಪರೆಯಿಂದ ಈವರೆಗೂ ಅದೇ ವೈಭವ, ಭಕ್ತಿ, ಶ್ರದ್ಧೆ, ಸಂಪ್ರದಾಯಗಳಿಂದ ಮುಂದುವರೆದಿದೆ. ದಸರಾ ಬಂತೆಂದರೆ ಇಡೀ ವಿಶ್ವವೇ ಬೆರಗುಗಣ್ಣಿನಿಂದ ಇತ್ತ ನೋಡುತ್ತದೆ ಎಂದು ಅವರು ಮೈಸೂರು ದಸರಾ ಸಡಗರ ಬಣ್ಣಿಸಿದರು.
ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ವೆಂಕಟೇಶ್ ಸಹ ಮಾತನಾಡಿದರು. ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕ ಹರೀಶ್ ಗೌಡ ಮತ್ತಿತರರು ಹಾಜರಿದ್ದರು. ಇದೇ ವೇಳೆ ರೈತ ಸಾಧಕರನ್ನು ಸನ್ಮಾನಿಸಲಾಯಿತು.
ಮತ್ಸ್ಯ ಮೇಳಕ್ಕೆ ಕೃಷಿ ಸಚಿವರಿಂದ ಚಾಲನೆ: ದಸರಾ ಮಹೋತ್ಸವದ ಅಂಗವಾಗಿ ನಗರದ ಜೆ.ಕೆ.ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮತ್ಸ್ಯಮೇಳಕ್ಕೆ ಕೃಷಿ ಸಚಿವ ಎನ್.ಚೆಲುವನಾರಾಯಣ ಸ್ವಾಮಿ ವಿದ್ಯುಕ್ತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಿದ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್ನಾಥ್, ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಸೇರಿ ಇನ್ನಿತರರು ಅಧಿಕಾರಿಗಳು ಮತ್ಸ್ಯ ಮೇಳದ ಮಳಿಗೆಗಳನ್ನು ವಿಕ್ಷೀಸಿದರು.
ಮೈಸೂರು ಭಾಗದಲ್ಲಿ ಈವರೆಗೆ ನೋಡಲು ಸಾಧ್ಯವಾಗದ ಅಪರೂಪದ ಮೀನುಗಳು, ಬಣ್ಣದ ಅಲಂಕಾರಿಕ ಮೀನುಗಳ ಪ್ರದರ್ಶನ, ಟನಲ್ ಅಕ್ವೇರಿಯಂ ಮೇಳದ ಮುಖ್ಯ ಆಕರ್ಷಣೆಯಾಗಿದೆ. ಮೇಳದಲ್ಲಿ ಗೋಲ್ಡ್ ಫಿಶ್, ಟೈಗರ್ ಬರ್ದ್, ಫೈಟರ್, ಆರೋವನ, ಫ್ಲವರ್ಹಾರ್ನ್, ಪ್ಲಾಟಿ, ವೈಟ್ ಮೊಲಿಸ್, ಗಪ್ಪಿ ಸ್ವರ್ಡ್ ಟೈಲ್, ಏಂಜಲ್ ಫಿಶ್, ಮೊಲಿಸ್, ಬಡ್ರ್ಸ್, ಮುಂತಾದ ಅಲಂಕಾರಿಕ ಹಾಗೂ ಲಾಭದಾಯಕ ಮೀನು ಸಾಕಾಣಿಕೆ ಕುರಿತ ಮಾಹಿತಿ ಸಾರ್ವಜನಿಕರ ಕಣ್ಮನ ಸೆಳೆಯಿತು.
ಕಪ್ಪೆಚಿಪ್ಪುಗಳನ್ನು ಸಂಗ್ರಹಿಸುವ ಮೂಲಕ ಕೃತಕ ಮುತ್ತುಗಳನ್ನು ಅಭಿವೃದ್ಧಿ ಪಡಿಸುವ ಸಿಹಿನೀರು ಮುತ್ತು ಉತ್ಪಾದನೆಯ ಕೃಷಿ ಬಗ್ಗೆ ವಿವರಣೆ ನೀಡುವದರ ಜೊತೆಗೆ ಮಣ್ಣಿನ ಏಡಿ ಸಾಕಾಣಿಕೆ ಹಾಗೂ ಅವುಗಳ ಸೇವನೆಯಿಂದ ಆಗುವ ಆರೋಗ್ಯದ ಲಾಭಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತವೆ.
ಈ ಬಾರಿ ಮತ್ಸ್ಯ ಮೇಳದಲ್ಲಿ ಸಿಹಿ ನೀರಿನ, ಉಪ್ಪು ನೀರಿನ ಮೀನುಗಳ ಅಕ್ವೇರಿಯಂ, ಪ್ಲಾಂಟೆಡ್ ಅಕ್ವೇರಿಯಂ ಸೇರಿದಂತೆ 35 ಕ್ಕೂ ಹೆಚ್ಚು ಅಕ್ವೇರಿಯಂಗಳಲ್ಲಿ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿವೆ.
ಅಮೆಜಾನ್‍ನಿಂದ ಪ್ಯಾರೇಟ್ ಫಿಶ್, ಸೌತ್ ಅಮೆರಿಕದಿಂದ ಜಿಯೋ ಪ್ಯಾರಿಸ್, ಅರೋನಾ, ಸ್ಟಿಂಗ್ರೆ, ಸಿಹಿ ನೀರಿನ ಮೀನುಗಳು, ಉಪ್ಪು ನೀರಿನ ಮೀನುಗಳು, ಜಲಸಸ್ಯಗಳಿಂದ ಅಲಂಕೃತವಾಗಿರುವ ಮೀನುಗಳು, ಪೆನರೋಡಿಯಂ, ಗ್ರ್ಯಾವಿಟಿ ಫಿಶ್ ಸೇರಿದಂತೆ ನಾನಾ ತಳಿಯ ಮೀನುಗಳನ್ನು ಮತ್ಸ್ಯ ಪ್ರಿಯರು ಕಣ್ತುಂಬಿಕೊಳ್ಳಬಹುದು.
ಮೀನು ಕೃಷಿ ಮಾಹಿತಿ: ಮತ್ಸ್ಯ ಮೇಳದಲ್ಲಿ ಕೇವಲ ಮೀನುಗಳನ್ನು ಅಷ್ಟೇ ಅಲ್ಲದೆ, ಇಲಾಖೆಯ ನಾನಾ ಯೋಜನೆಗಳು ಹಾಗೂ ಮೀನುಗಾರಿಕೆ ಕುರಿತು ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗಿದೆ. ಜಮೀನು ಇಲ್ಲದವರು ಜಲಾಶಯಗಳಲ್ಲಿ ಪಂಜರ ಮೀನು ಕೃಷಿ ಕೈಗೊಳ್ಳವುದರ ಪೂರ್ಣ ವಿವರಣೆ ದೊರೆಯಲಿದೆ. ಅಕ್ವಾಫೆÇೀನಿಕ್ಸ್ ಕೃಷಿ ಸೇರಿದಂತೆ ಮೀನುಗಾರಿಕೆ ಕ್ಷೇತ್ರದ ಇತ್ತೀಚಿನ ತಾಂತ್ರಿಕತೆಗಳ ವಿವರಣೆ ನೀಡುವ ಮಳಿಗೆಗಳನ್ನು ಕಾಣಬಹುದು. ಅಲ್ಲದೆ, ಮೀನಿನ ಆಹಾರ ಮತ್ತು ಮೀನು ಕೃಷಿಗೆ ಬೇಕಾಗುವ ಇನ್ನಿತರ ವಸ್ತುಗಳ ವಿವರಣೆ ನೀಡುವ ಮಳಿಗೆಗೆಳನ್ನು ತೆರೆಯಲಾಗಿದೆ. ಇದಲ್ಲದೆ ಮೀನುಗಾರಿಕೆಗೆ ಪೂರಕವಾಗಿ ಪಶುಪಾಲನೆ, ಭತ್ತ ಬೆಳೆಯುವುದು, ಕೋಳಿ ಸಾಕಣೆ, ಮೀನು ಕೃಷಿಯಲ್ಲಿ ಅಳವಡಿಸಿಕೊಂಡಿರುವ ವಿಜ್ಞಾನ ಮತ್ತು ತಾಂತ್ರಿಕತೆಗಳು ಸೇರಿದಂತೆ ಸಮಗ್ರ ಮೀನು ಕೃಷಿ ಬಗ್ಗೆ ವಿವರಣೆ ಸಿಗುತ್ತದೆ.
ಅಲಂಕಾರಿಕ ಹಾಗೂ ಅತ್ಯಂತ ಅಪರೂಪದ ವಿದೇಶಿ ಮೀನುಗಳನ್ನು ಮತ್ಸ್ಯ ಪ್ರಿಯರು ಕಣ್ತುಂಬಿಕೊಳ್ಳಬಹುದು. ಅಲ್ಲದೆ ಮೀನು ಕೃಷಿ ಕೈಗೊಳ್ಳುವ ರೈತರಿಗೆ ಇಲಾಖೆಯಿಂದ ಕೈಗೊಂಡಿರುವ ಯೋಜನೆಗಳು, ತಂತ್ರಜ್ಞಾನಗಳು, ಅವಕಾಶಗಳ ಬಗ್ಗೆ ವಿವರಣೆ ನೀಡಲಾಗುವುದು.
ಮತ್ಸ್ಯ ಮೇಳದಲ್ಲಿ ವಿವಿಧ ಮೀನುಗಳನ್ನು ನೋಡಲು ಪ್ರವಾಸಿರು ಮುಗಿಬಿದ್ದರು. ವಿವಿಧ ಜಾತಿಯ, ಬಣ್ಣದ ಮೀನುಗಳನ್ನು ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಡಿಯೋ ತೆಗೆದು ಸಂಭ್ರಮಿಸಿದರು.