ಲಿಂಗಧಾರಣೆಯಿಂದ ಸಂಕಷ್ಟ ದೂರ
ಭಾಲ್ಕಿ:ಆ.19:ತಾಲೂಕಿನ ಕದಲಾಬಾದ್ ಗ್ರಾಮದಲ್ಲಿ ಶ್ರಾವಣ ಮಾಸದ ಬಸವ ದರ್ಶನ ಪ್ರವಚನ ಸಮಾಪ್ತಿ ನಿಮಿತ್ತ ಭಾನುವಾರ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಮತ್ತು ಪೂಜಾ ವಿಧಾನ ಕಾರ್ಯಕ್ರಮ ನೆರವೇರಿತು.
ಗ್ರಾಮದ ಬಸವ ಮಂಟಪದಲ್ಲಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯದಲ್ಲಿ ನಡೆದ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು, ಹಿರಿಯರು ಸೇರಿ ನೂರಾರು ಭಕ್ತರು ಇಷ್ಟಲಿಂಗ ದೀಕ್ಷೆ ಪಡೆದು ಕೊಂಡರು.
ಬಸವ ಗುರುವಿನ ಪೂಜೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪೂಜ್ಯರು ಇಷ್ಟಲಿಂಗಕ್ಕೆ ಸಂಸ್ಕಾರ ನೀಡಿ ಭಕ್ತರ ಹಣೆಗೆ ಭಸ್ಮ ಧಾರಣೆ ನೆರವೇರಿಸಿ ಹೂವು, ಪತ್ರಿ ಅರ್ಪಿಸಿ ಇಷ್ಟಲಿಂಗ ಕೈಯಲಿಟ್ಟು ಆರತಿ ಬೆಳಗಿಸಿ ಪುಷ್ಪವೃಷ್ಟಿ ಸುರಿದು ಇಷ್ಟಲಿಂಗದ ಜತೆಗೆ ಲಗ್ನ ಮಾಡಿಸಿ ಮಂತ್ರ ಉಪದೇಶಿಸಿದರು.
ನಂತರ ಮಾತನಾಡಿದ ಪೂಜ್ಯರು, ವಿಶ್ವಗುರು ಬಸವಣ್ಣನವರು ಕರುಣಿಸಿದ ಇಷ್ಟಲಿಂಗವನ್ನು ಪ್ರತಿಯೊಬ್ಬ ಲಿಂಗಾಯತನು ಅಂಗದ ಮೇಲೆ ಧರಿಸಬೇಕು.
ಇಂದಿನ ಆಧುನಿಕತೆಯಲ್ಲಿ ಯುವಶಕ್ತಿ ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗಿ ಇಷ್ಟಲಿಂಗದ ಮಹತ್ವ ಅರಿಯದೇ ಅನೇಕ ದುಶ್ಚಟಗಳಿಗೆ ಬಲಿಯಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದೆ ಆತಂಕ ವ್ಯಕ್ತಪಡಿಸಿದರು.
ಇದರಿಂದ ಹೊರಬಂದು ಸಂಕಷ್ಟ ದೂರವಾಗಬೇಕಾದರೇ ಪ್ರತಿಯೊಬ್ಬರು ಇಷ್ಟಲಿಂಗದ ಮೊರೆ ಹೋಗುವುದು ಅಗತ್ಯವಾಗಿದೆ.
ಹಾಲಿಗೆ ಸಂಸ್ಕಾರ ನೀಡಿದರೆ ತುಪ್ಪವಾಗುತ್ತದೆ. ಹಾಗೇ ನಿರಾಕಾರ ಆಗಿರುವ ದೇವನ ಒಲಿಸಿಕೊಳ್ಳಲು ಇಷ್ಟಲಿಂಗ ಉತ್ತಮ ಮಾರ್ಗವಾಗಿದೆ.
ಇಷ್ಟಲಿಂಗವನ್ನು ಶ್ರದ್ದೆ, ಭಕ್ತಿಯಿಂದ ಪೂಜಿಸಿದರೇ ನೆಮ್ಮದಿಯ ಜೀವನದ ಜತೆಗೆ ದೇವನ ಸಾಮೀಪ್ಯಕ್ಕೆ ಕೊಂಡೊಯ್ಯುಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಸವಲಿಂಗ ದೇವರು ಇಷ್ಟಲಿಂಗ ದೀಕ್ಷೆಯ ವಿಧಿ ವಿಧಾನ ತಿಳಿಸಿಕೊಟ್ಟರು.
ಬಸವ ದರ್ಶನದ ಪ್ರವಚನದ ಮೂಲಕ ಪ್ರವಚನ ಬಸವಾದಿ ಶರಣರ ಚರಿತ್ರೆಯನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಎಲ್ಲರೂ ಪ್ರವಚನದ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಗಿಸಬೇಕು.