ಆಧ್ಯಾತ್ಮ ಜ್ಞಾನ ಸ್ವೀಕರಿಸಿದರೆ ಸುಂದರ ಬದುಕು ನಮ್ಮದಾಗುತ್ತದೆಃ ಕಾಖಂಡಕಿಯ ಶಿವಯೋಗಿಶ್ವರ ಸ್ವಾಮೀಜಿ
ಬಸವನಬಾಗೇವಾಡಿ, ಆ. 19:ಜ್ಞಾನದಲ್ಲಿ ಮಡಿವಂತಿಕೆಯೆಂಬುವದು ಇಲ್ಲವೇ ಇಲ್ಲ. ಪ್ರತಿಯೊಬ್ಬರೂ ಎಲ್ಲೆಡೆಯಿಂದ ಆಧ್ಯಾತ್ಮಿಕ ಜ್ಞಾನವನ್ನು ಸ್ವೀಕರಿಸುವಂತಾದರೆ ಜೀವನ ಸುಂದರ ಮಾಡಿಕೊಳ್ಳಬಹುದು ಎಂದು ಕಲ್ಯಾಣ ಕಾಖಂಡಕಿಯ ಶಿವಯೋಗಿಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಯಲ್ಲಾಲಿಂಗೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ಆಧ್ಯಾತ್ಮಿಕ ಚಿಂತನಾ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಚಿಂತನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಕು ಬಹಳ ಪವಿತ್ರವಾಗಿದೆ. ಬೆಳಕನ್ನು ಎಂದಿಗೂ ಹೊಲಸು ಮಾಡಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಪವಿತ್ರ ಜ್ಞಾನವನ್ನು ಅಷ್ಟೇ ಪವಿತ್ರವಾಗಿರುತ್ತದೆ. ಸರಿಯಾದ ಜ್ಞಾನವನ್ನು ತಿಳಿದುಕೊಂಡರೆ ಉತ್ತಮ ಬದುಕು ಸಾಗಿಸಬಹುದು. 12 ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಣ್ಣನವರ ಪ್ರೇಮದ ತಳಹದಿ ನೋಡಿ ವಿವಿಧೆಡೆಗಳಿಂದ ಶರಣರು ಕಲ್ಯಾಣಕ್ಕೆ ಬಂದರು. ಶರಣರು ಲಿಂಗಾಂಗ ಸಾಮರಸ್ಯ, ಕಾಯಕ ಮಾಡುವ ಮೂಲಕ ದಿವ್ಯಯೋಗಿಗಳಾಗಿದ್ದರು ಎಂದರು.
ಶರಣರನ್ನು ಅರ್ಥಮಾಡಿಕೊಳ್ಳುವ ಮೂಲಕ ಅವರನ್ನು ಯೋಗದ ದೃಷ್ಟಿಯಿಂದ ನೋಡುವ ಅಗತ್ಯವಿದೆ. ಯೋಗವನ್ನು ಭಾರತ ದೇಶವು ಇಡೀ ವಿಶ್ವಕ್ಕೆ ಅಪರೂಪ ಕೊಡುಗೆಯಾಗಿ ನೀಡಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವಂತಾಗಬೇಕು. ಜೀವನವನ್ನು ಯೋಗಮಯ, ವಿಜ್ಞಾನಮಯವನ್ನಾಗಿಸಿಕೊಳ್ಳಬೇಕಿದೆ. ಬದುಕಿಗೆ ಶ್ರೇಯ, ಪ್ರೇಯ ಎಂಬ ಎರಡು ಮುಖಗಳಿವೆ. ಶ್ರೇಯವು ಆಧ್ಯಾತ್ಮಿಕ,ಯೋಗ ಮಾರ್ಗವಾದರೆ, ಪ್ರೇಯವು ಲೌಕಿಕ,ಭೋಗದ ಮಾರ್ಗವಾಗಿದೆ. ನಮ್ಮ ಬದುಕಿನಲ್ಲಿ ನಾವು ಏನು ತಿಳಿದುಕೊಂಡರೆ ಸಮಾಧಾನವಾಗಿ ಇರುತ್ತೇವೆ ಎಂಬುವದನ್ನು ತಿಳಿದುಕೊಳ್ಳುವದು ತುಂಬಾ ಮುಖ್ಯವಾಗಿದೆ ಎಂದರು.
ಕ್ರಿಯಾಂಗ, ಜ್ಞಾನಾಂಗ, ಭಾವಾಂಗ ಈ ಮೂರು ಜೀವನದಲ್ಲಿರುವದನ್ನು ಕಾಣುತ್ತೇವೆ. ಕ್ರಿಯಾಂಗ ಶರೀರಕ್ಕೆ ಸಂಬಂಧಿಸಿದರೆ, ಜ್ಞಾನಾಂಗವು ಜಗತ್ತಿನಲ್ಲಿರುವ ಜ್ಞಾನವನ್ನು ಅರಿತುಕೊಳ್ಳಲು ಸಂಬಂಧಿಸಿದೆ. ಭಾವಾಂಗವು ನಮ್ಮ ಮನಸ್ಸಿನಲ್ಲಿರುವ ಭಾವನೆಗಳಿಗೆ ಸಂಬಂಧಿಸಿದೆ. ಈ ಮೂರು ಸದುಪಯೋಗವಾದರೆ ಸುಂದರ ಜೀವನ ಕಳೆಯಬಹುದು.ಬಸವಣ್ಣನವರು ಸೇರಿದಂತೆ ಅನೇಕ ಋಷಿಗಳು-ಸಂತರು ಪವಿತ್ರ ಜೀವನ ಕಳೆದಿದ್ದಾರೆ. ಅವರೆಲ್ಲರೂ ಒಳ್ಳೆಯದನ್ನು ತಿಳಿದುಕೊಂಡು ಒಳ್ಳೆಯದನ್ನು ನಮಗೆ ನೀಡಿದ್ದಾರೆ. ಅವರೆಲ್ಲರನ್ನು ದಾರ್ಶನಿಕರು ಎಂದು ಕರೆಯುತ್ತೇವೆ ಎಂದರು.
ಯೋಗದ ಅನುಭವಕ್ಕೆ ಬಂದಾಗ ಪರಮಸತ್ಯ ಅರಿವು ಆಗುತ್ತದೆ. ಶರಣರು ಯೋಗ ಜೀವನವನ್ನು ಸಾಗಿಸಿದರು. ಪ್ರಾಣಲಿಂಗ ಮನಸ್ಸಿನಲ್ಲಿದೆ. ಇಷ್ಟಲಿಂಗ ಹೊರಗೆ ಇದೆ. ಪೂಜೆ ಯೋಗವಾಗಬೇಕು. ಲಿಂಗಪ್ರಸಾದಿ, ಸಮಯಪ್ರಸಾದಿ, ಅಚ್ಚಪ್ರಸಾದಿಯಾಗಬೇಕು. ಸಾಧನಾ ಕ್ಷೇತ್ರದಲ್ಲಿ ಶರಣರ ತತ್ವಗಳನ್ನು ಯೋಗದ ದೃಷ್ಟಿಕೋನದಿಂದ ಚಿಂತನೆ ಮಾಡುವ ಅಗತ್ಯವಿದೆ ಎಂದರು.
ಬದುಕನ್ನು ನಾವು ಒಮ್ಮೊಮ್ಮೆ ಭ್ರಮೆಯಲ್ಲಿ ಸಿಲುಕಿಸುತ್ತವೆ. ಕೆಲವೊಮ್ಮೆ ನಮ್ಮ ಅಜ್ಞಾನದಿಂದ ಅನೇಕ ಕೆಟ್ಟ ಅವಘಡಗಳು ಸಂಭವಿಸುತ್ತವೆ. ಬದುಕಿನ ಬಗ್ಗೆ ಸ್ಪಷ್ಟ ಚಿತ್ರಣ ಅರಿತುಕೊಂಡು ಸದಾ ಆನಂದದಿಂದ ಇರಬೇಕು. ಶರಣರು ಮಾಡಿದ ಯೋಗವನ್ನು ಎಲ್ಲರೂ ಮಾಡಲು ಸಾಧ್ಯ. ಮನೆಯಲ್ಲಿ ಶರಣರು ಮಾಡಿದ ಆಧ್ಯಾತ್ಮಯೋಗವನ್ನು ಮಾಡಿದರೆ ಮನೆಯೇ, ದೇಹವೇ ದೇವಾಲಯವಾಗುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಬೆಳೂಟಗಿಯ ಶಿವಕುಮಾರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಆಧ್ಯಾತ್ಮಿಕ ಅಂಶಗಳನ್ನು ಅಳವಡಿಸಿಕೊಂಡರೆ ಜೀವನ ಸುಗಮವಾಗಿ ಸಾಗುತ್ತದೆ. ಪ್ರತಿಯೊಬ್ಬರೂ ಬಸವ ತತ್ವದಂತೆ ಬಾಳುವಂತಾಗಬೇಕೆಂದರು.
ಸಾನಿಧ್ಯ ವಹಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶರಣರು ಶಿವಯೋಗವನ್ನು ಸಾ?ಸಿದ್ದರು. ಶರಣರ ತತ್ವ ಸಂದೇಶ, ಯೋಗದ ಕುರಿತು ಜನಮಾನಸಕ್ಕೆ ಮುಟ್ಟಿಸುವ ಅಗತ್ಯವಿದೆ. ಪೂಜ್ಯರು ಈ ಕೈಂಕರ್ಯಕ್ಕೆ ಮುಂದಾಗಿದ್ದಾರೆ. ಮೊದಲ ಆಧ್ಯಾತ್ಮಿಕ ಚಿಂತನ ಉಪನ್ಯಾಸ ಬಸವನೆಲದಿಂದ ಆರಂಭವಾಗಿರುವದು ಸಂತಸ ತಂದಿದೆ. ಪೂಜ್ಯ ಶಿವಯೋಗಿಶ್ವರ ಸ್ವಾಮೀಜಿಯವರ ಆಧ್ಯಾತ್ಮಿಕ ಚಿಂತನ ಉಪನ್ಯಾಸಗಳು ನಿರಂತರವಾಗಿ ನಡೆಯುವಂತಾಗಲೆಂದರು.
ಆಧ್ಯಾತ್ಮಿಕ ಚಿಂತನಾ ಸಮಿತಿಯ ಸಂಗಮೇಶ ಪೂಜಾರಿ ಪ್ರಾಸ್ತವಿಕವಾಗಿ ಮಾತನಾಡಿ, ಸಾರ್ಥಕ ಬದುಕಿಗೆ ಉತ್ತಮ ಮೌಲ್ಯಗಳು ತುಂಬಾ ಅಗತ್ಯವಿದೆ. ನಮ್ಮಲ್ಲಿರುವ ಮನದ ಮೈಲಿಗೆ ಕಳೆದು ಆಧ್ಯಾತ್ಮಿಕ ವಿಚಾರಗಳು ಮನದಲ್ಲಿ ಮೂಡಲಿ ಎಂಬ ಉದ್ದೇಶದ ಜೊತೆಗೆ ತಾತ್ವಿಕ ಚಿಂತನೆಯೊಂದಿಗೆ ವೈಜ್ಞಾನಿಕ ಚಿಂತನೆ ಆಗಬೇಕೆನ್ನುವ ಉದ್ದೇಶದಿಂದ ಕಾಖಂಡಕಿಯ ಪೂಜ್ಯರು ಬಸವಜನ್ಮಸ್ಥಳ ಬಸವನಬಾಗೇವಾಡಿಯಿಂದ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮ ಆರಂಭಿಸಿದ್ದಾರೆ. ತಿಂಗಳಿಗೆ ಒಂದರಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಿರಂತರವಾಗಿ ವರ್ಷವೀಡಿ ಈ ಆಧ್ಯಾತ್ಮಿಕ ಉಪನ್ಯಾಸ ನಡೆಯಲಿವೆ ಎಂದರು.
ಶರಣು ಬಸ್ತಾಳ ಪ್ರಾರ್ಥಿಸಿದರು.
ಡಾ.ಮಹಾಂತೇಶ ಮಡಿಕೇಶ್ವರ ಸ್ವಾಗತಿಸಿದರು. ಡಾ.ಯುವರಾಜ ಮಾದನಶೆಟ್ಟಿ ನಿರೂಪಿಸಿದರು. ಕೊಟ್ರೇಶ ಹೆಗ್ಡಾಳ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರರ ಪ್ರತಿಮೆಗೆ ಶ್ರೀಗಳು ಪುಷ್ಪಾರ್ಚನೆ ಗೈದರು. ಉಪನ್ಯಾಸ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯ ಆಧ್ಯಾತ್ಮಜೀವಿಗಳು ಭಾಗವಹಿಸಿದ್ದರು.