ದೀಕ್ಷೆಯು ಮೋಕ್ಷದ ಮಹಾದ್ವಾರ
ಶ್ರೀಶೈಲಂ (ಆಂಧ್ರಪ್ರದೇಶ) :ಆ.19:ವೀರಶೈವ ಲಿಂಗಾಯತ ಧರ್ಮದಲ್ಲಿ ಶ್ರೀ ಗುರುವು ಶಿಷ್ಯನಿಗೆ ದಯಪಾಲಿಸುವ ಲಿಂಗದೀಕ್ಷೆಯನ್ನು ಯಾವುದೇ ಜಾತಿಭೇದವಿಲ್ಲದೇ ಸರ್ವರೂ ಪಡೆದುಕೊಳ್ಳಲು ಮುಕ್ತ ಅವಕಾಶವಿರುವುದರಿಂದ ಮತ್ತು ಮೋಕ್ಷ ಮಾರ್ಗದಲ್ಲಿ ಸಾಗಲು ಇದುವೇ ಮೊದಲ ಅಡಿಪಾಯ ಆಗಿರುವುದರಿಂದ ಇದು ಮೋಕ್ಷಕ್ಕೆ ಮಹಾದ್ವಾರವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಶ್ರೀಶೈಲದ ಶ್ರೀ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ಜರುಗಿದ ಸಾಮೂಹಿಕ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ ಈ ವಿಚಾರವನ್ನು ತಿಳಿಸಿದರು.
ಮನುಷ್ಯನಿಗೆ ಅನಾದಿಕಾಲದಿಂದ ಆಣವ ಮಾಯಿಯ ಮತ್ತು ಕಾರ್ಮಿಕ ಎಂಬ ಮೂರು ಪ್ರಕಾರದ ಮಲಗಳು ಆವರಿಸಿರುತ್ತವೆ. ಈ ಮಲಗಳೇ ಮನುಷ್ಯನ ಸಾಂಸಾರಿಕ ಎಲ್ಲ ದುಃಖಗಳಿಗೆ ಮತ್ತು ಭವಬಂಧನಕ್ಕೆ ಕಾರಣವಾಗಿರುತ್ತವೆ. ಶ್ರೀಗುರುವು ಇಷ್ಟಲಿಂಗ ದೀಕ್ಷೆ ಮತ್ತು ಅಯ್ಯಾಚಾರಗಳನ್ನು ನೀಡುವ ಸಂದರ್ಭದಲ್ಲಿ ವೇಧಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬ ಮೂರು ಪ್ರಕಾರದ ದೀಕ್ಷೆಗಳನ್ನು ದಯಪಾಲಿಸುವ ಮೂಲಕ ಆಣವಾದಿ ಮಲತ್ರಯಗಳನ್ನು ತಿರೋಹಿತಗೊಳಿಸುತ್ತಾನೆ ಮತ್ತು ಶಿವಸ್ವರೂಪವಾದ ಇಷ್ಟಲಿಂಗವನ್ನು ದೇಹದಮೇಲೆ ಸದಾ ಧರಿಸಿಕೊಂಡು ಪ್ರತಿನಿತ್ಯ ಅದನ್ನು ತಪ್ಪದೆ ಪೂಜಿಸಬೇಕೆಂದು ಆದೇಶಿಸುತ್ತಾನೆ. ಸದಾಚಾರ ಸದ್ವಿಚಾರ ಸಂಪನ್ನನಾಗಿ ನಿಷ್ಠೆಯಿಂದ ಲಿಂಗಪೂಜಾ ಮಹಾವ್ರತವನ್ನು ಪರಿಪಾಲಿಸುವ ವ್ಯಕ್ತಿಯು ಸುಲಭವಾಗಿ ಮೋಕ್ಷವನ್ನು ಪಡಿಯುತ್ತಾನೆ ಎಂಬುದಾಗಿ ವಿವರಿಸಿದರು
ಸಮಾಜದಲ್ಲಿ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಮತ್ತು ಶೂದ್ರ ಎಂಬುದಾಗಿ ನಾಲ್ಕು ವರ್ಣಗಳು ಉಂಟು ಬ್ರಹ್ಮಚರ್ಯ ಗೃಹಸ್ಥ ವಾನಪ್ರಸ್ಥ ಮತ್ತು ಸನ್ಯಾಸ ಎಂಬುದಾಗಿ ನಾಲ್ಕು ಆಶ್ರಮಗಳುಂಟು. ಸ್ತ್ರೀ ಪುರುಷ ಮತ್ತು ನಪುಂಶಕ ಎಂಬುದಾಗಿ ಮೂರು ಲಿಂಗಗಳು ಉಂಟು. ಇವುಗಳಲ್ಲಿ ಯಾವುದೇ ಜಾತಿ ವರ್ಗ ವರ್ಣದವರಿದ್ದರೂ ಶಿವನಲ್ಲಿ, ಶಿವಧರ್ಮದ ಆಚರಣೆಯಲ್ಲಿ ಶ್ರದ್ಧೆಯುಳ್ಳವನಾಗಿದ್ದರೆ, ಗುರುವಿನಿಂದ ದೀಕ್ಷೆಯನ್ನು ಪಡೆದು ಲಿಂಗಧಾರಣೆ ಮಾಡಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದ್ದರಿಂದ ಲಿಂಗವು ಯಾವುದೇ ಒಂದು ಜಾತಿ ಅಥವಾ ಸಮುದಾಯದ ಕುರುಹಾಗಿರದೇ ಶಿವಜ್ಞಾನದ ಮತ್ತು ಶಿವಧರ್ಮದ ಆಚರಣೆಗಳ ಸಂಕೇತವಾಗಿದೆ. ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿ ಪ್ರತಿನಿತ್ಯ ತಪ್ಪದೆ ಪೂಜಿಸುವವರೆಲ್ಲರೂ ವೀರಶೈವ ಲಿಂಗಾಯಿತರು. ಲಿಂಗದಾರಿಗಳಾದವರೆಲ್ಲರೂ ಒಂದೇ ತೆರನಾದ ಧಾರ್ಮಿಕ ಆಚರಣೆ ಹೊಂದಿದವರಾಗಿರುವುದರಿಂದ ಅವರಲ್ಲಿ ಯಾವುದೇ ರೀತಿಯ ಭೇದಭಾವವನ್ನು ಮಾಡಬಾರದೆಂದು ತಿಳಿಸಿದರು.
ಮಾಡುವ ಪೂಜೆ ಫಲಪ್ರದವಾಗಬೇಕಾದರೆ ಪರೋಪಕಾರ ಮುಂತಾದ ಲೋಕೊತ್ತರ ಗುಣಗಳನ್ನು ಅಳವಡಿಸಿಕೊಂಡಿರಬೇಕು ಪ್ರತಿನಿತ್ಯ ಪೂಜೆ ಮಾಡೋದು ಆದರೆ ಮನದಲ್ಲಿ ದುರ್ಗುಣ ದುರಾಚಾರಗಳನ್ನು ರೂಡಿಸಿಕೊಂಡಿದ್ದರೆ ಆ ಪೂಜೆ ಪ್ರಯೋಜನಕ್ಕೆ ಬರಲಾರದು. ರಾವಣ ಮಹಾ ಶಿವಭಕ್ತನಾಗಿದ್ದರೂ ಮಹಾ ಶಕ್ತಿವಂತನಾಗಿದ್ದರೂ ಲೋಕಕಂಟಕವಾದ ಕುಕೃತ್ಯಗಳಲ್ಲಿ ತೊಡಗಿಕೊಂಡಿರುವ ಕಾರಣ ಕೊನೆಗೆ ಅವನತಿ ಹೊಂದಬೇಕಾಯಿತು. ಬದುಕು ಸಾಗಬೇಕಾದರೆ ಪ್ರೀತಿ ಎಷ್ಟು ಮುಖ್ಯವೋ, ನಾವು ಉನ್ನತಿ ಪಡೆದುಕೊಳ್ಳಬೇಕಾದರೆ, ನೀತಿ ಅಷ್ಟೇ ಮುಖ್ಯವಾದುದು. ಎಂದರು.
ಪಂಚಪೀಠಗಳು ಸನಾತನ ಕಾಲದಿಂದಲೂ ಯಾವುದೇ ತಾರತಮ್ಯವಿಲ್ಲದೇ ಸರ್ವ ಜನರಿಗೂ ಧರ್ಮದ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ನೈತಿಕ ಮಾರ್ಗದರ್ಶನವನ್ನು ದಯಪಾಲಿಸುತ್ತ ಬಂದಿವೆ. ಈ ವಿಷಯದಲ್ಲಿ ಬಸವಾದಿ ಶಿವಶರಣರ ಪಾತ್ರವು ಕೂಡ ಅತ್ಯಂತ ಮಹತ್ವಪೂರ್ಣವಾದುದು. ಕಾರಣ ಸನಾತನ ಆಚಾರ್ಯ ಪರಂಪರೆಯನ್ನು ಮತ್ತು ಶರಣ ಪರಂಪರೆಯನ್ನು ಸಮಾನ ಗೌರವದಿಂದ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುಗುಂಟದ ಶ್ರೀ ಷ ಬ್ರ ಸದಾನಂದ ಶಿವಾಚಾರ್ಯ ಸ್ವಾಮಿಗಳು ಎಲ್ಲ ದೀಕ್ಷಾರ್ಥಿಗಳಿಗೆ ಲಿಂಗ ಮತ್ತು ಮಂತ್ರೋಪದೇಶವನ್ನು ನೀಡಿದರು. ವಿಜಯಪುರದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಉಪಸ್ಥಿತರಿದ್ದರು. ದೇವಸ್ಥಾನದ ಉಪಪ್ರಧಾನ ಅರ್ಚಕರಾದ ಶಿವಶಂಕರ ಶಾಸ್ತ್ರಿಗಳು ಮಂತ್ರ, ವಿಭೂತಿ, ಲಿಂಗ, ರುದ್ರಾಕ್ಷಗಳ ಮಹಿಮೆಯನ್ನು ತಿಳಿಸಿದರು. ದೀಕ್ಷಾ ಕಾರ್ಯಕ್ರಮದ ಪೌರೋಹಿತ್ಯವನ್ನು ನೆರವೇರಿಸಿದ ಶ್ರೀಶೈಲದ ವೀರಶೈವ ಗುರುಕುಲದ ಪ್ರಾಚಾರ್ಯರಾದ ಮಲ್ಲಿಕಾರ್ಜುನ ಶಾಸ್ತ್ರಗಳು ಜಪ ಹಾಗೂ ಲಿಂಗಪೂಜೆ ಮಾಡುವ ವಿಧಾನವನ್ನು ತಿಳಿಸಿದರು. ಶ್ರೀ ಪೀಠದ ಮುಖ್ಯ ವ್ಯವಸ್ಥಾಪಕರಾದ ಎಮ್ ಬಿ ಮಂಜುನಾಥ ಉಪಸ್ಥಿತರಿದ್ದರು. ಜಂಗಮ ಸಮಾಜದ ಕಾರ್ಯದರ್ಶಿ ನಟರಾಜ್ ನಿರೂಪಿಸಿದರು. ಮತ್ತಿತರರು ಭಾಗವಹಿಸಿದ್ದರು. ನೂರಾರು ಜಂಗಮ ವಟುಗಳು ಅಯ್ಯಾಚಾರವನ್ನು ಮತ್ತು ಅನೇಕ ಸದ್ಭಕ್ತರು ಲಿಂಗದೀಕ್ಷೆಯನ್ನು ಪಡೆದುಕೊಂಡರು