ಶ್ರಾವಣ ಮಾಸದ ನಡುವಿನ ಸೋಮವಾರ: ಶರಣಬಸವೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ
ಕಲಬುರಗಿ,ಆ.19-ಶ್ರಾವಣ ಮಾಸದ ನಡುವಿನ ಸೋಮವಾರದ ಅಂಗವಾಗಿ ಇಲ್ಲಿನ ಸುಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ನಾಡಿನ ವಿವಿಧೆಡೆಯಿಂದ ಭಕ್ತ ಸಾಗರವೇ ಹರಿದು ಬಂದಿತು.
ನಗರವು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಬೆಳಿಗ್ಗೆಯೇ ಭಕ್ತರು ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶರಣಬಸವೇಶ್ವರರ ದರ್ಶನ ಪಡೆದರು. ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಮತ್ತಿತರ ರಾಜ್ಯಗಳಿಂದಲೂ ಭಕ್ತಾಧಿಗಳು ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶರಣಬಸವೇಶ್ವರರ ದರ್ಶನ ಪಡೆದರು.
ಶ್ರಾವಣ ಮಾಸದ ನಡುವಿನ ಸೋಮವಾರದ ಅಂಗವಾಗಿ ಶರಣಬಸವೇಶ್ವರರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಕ್ತರು ಸೇರಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಾಡಿನ ಮತ್ತು ನೆರೆಯ ರಾಜ್ಯಗಳಿಂದ ಆಗಮಿಸಿದ ಭಕ್ತಾಧಿಗಳಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಶರಣಬಸವೇಶ್ವರರ ದೇವಸ್ಥಾನ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ಜನ ಸೇರಿದ್ದರಿಂದ ಜಾತ್ರೆಯ ವಾತಾವರಣ ನಿರ್ಮಾಣವಾದಂತಾಗಿತ್ತು.