ಮಕ್ಕಳ ಅದ್ಭುತ ಪ್ರತಿಭೆಗೆ ಉತ್ತಮ ಅವಕಾಶ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ,19- ನಗರದ ಬಸವರಾಜೇಶ್ವರಿ ಶಾಲಾ ಆವರಣದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಅಂಗವಾಗಿ  ನಡೆದ ‘ಪ್ರತಿಭಾ ಸಂಗಮ’ ಮಕ್ಕಳ ಅದ್ಭುತ ಪ್ರತಿಭೆಗೆ ಉತ್ತಮ ಅವಕಾಶವಾಗಿದ್ದು ಶಾಲಾ ಮಕ್ಕಳು ಇಂತಹ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಹಾಗೂ ಶಿಕ್ಷಕರು ಮಕ್ಕಳ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಬಿ.ಪಿ.ಎಸ್.ಸಿ. ಶಾಲೆಯ ಅಧ್ಯಕ್ಷ ಡಾ. ಎಸ್.ಜೆ.ವಿ. ಮಹಿಪಾಲ ನುಡಿದರು.
ಅವರು ಕಲ್ಯಾಣ ಕರ್ನಾಟಕ ವಿಕಾಸ ಅಕಾಡಮಿ, ಬಳ್ಳಾರಿ, ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ಬಸವರಾಜೇಶ್ವರಿ ಸ್ಕೂಲ್ ಜಂಟಿಯಾಗಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ವಿವಿಧ ಸ್ಪರ್ಧೆಗಳ ಪ್ರತಿಭಾ ಸಂಗಮ ಉದ್ಘಾಟನೆಯನ್ನು ಸಂಸ್ಕೃತಿ ಪವಿತ್ರತೆಯ ಪ್ರತೀಕ ಶ್ರೀ ತುಳಸಿ ಗಿಡಕ್ಕೆ ನೀರು ಎರೆಯುವುದರ ಮೂಲಕ ನೆರವೇರಿಸಿ ಮಾತನಾಡುತ್ತಿದ್ದರು.
ಮಕ್ಕಳ ನೆನಪಿನ ಶಕ್ತಿ ಅಗಾಧವಾದದ್ದು ಎಂದು 2004ರ ಸುನಾಮಿ ಬರುವ ಕೆಲವೇ ನಿಮಿಷಗಳ ಮೊದಲು ಸಮುದ್ರ ತೀರದ ಜನಗಳಿಗೆ ಬಾಲಕಿ ಎಚ್ಚರಿಸಿದ ಪ್ರಸಂಗವನ್ನು ನೆನೆದ ಅವರು ಆ ಬಾಲಕಿಯನ್ನು ಆ ನಂತರ ಮಾಧ್ಯಮದವರು ಪ್ರಶ್ನಿಸಿದಾಗ ಶಾಲಾ ಶಿಕ್ಷಕರು ಸಮುದ್ರಗಳಲ್ಲಿ ಭೂಕಂಪವಾದರೆ ಹೀಗಾಗುತ್ತದೆ ಎಂದು ತಿಳಿಸಿದ್ದರು ಹೇಳಿದರು. ಹೀಗಾಗಿ ಮಕ್ಕಳ ಪ್ರತಿಭೆ ಹೊರ ಬರಲು ಶಿಕ್ಷಕರ ಪ್ರೀತಿಯ ಹಾಗೂ ಶೈಕ್ಷಣಿಕ ಬೋಧನೆ ವಿದ್ಯಾರ್ಥಿಗಳ ಪ್ರಾಮಾಣಿಕ ಪ್ರಯತ್ನ ಅವಶ್ಯವೆಂದರು.
ಅತಿಥಿಗಳಾಗಿ ಕುರುಗೋಡು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಯೀಮುರ್ ರೆಹಮಾನ್, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಅಡ್ಡೇರು ಮಲ್ಲಪ್ಪ, ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಮರಿಸ್ವಾಮಿರೆಡ್ಡಿ, ತಾಲೂಕು ಶಿಕ್ಷಕರ ಸಂಘದ ಎನ್.ರಮೇಶ್ ಭಾವಹಿಸಿದ್ದರು.
ಕಲಬುರ್ಗಿಯಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ ಅತ್ಯಂತ ಬೃಹತ್ ಪ್ರಮಾಣದಲ್ಲಿ ನಡೆಯಲಿದ್ದು ರೈತರು, ಶಿಕ್ಷಕರು, ಉದ್ಯಮಿಗಳು, ವಿಜ್ಞಾನಿಗಳು, ಯೋಗ ಗುರುಗಳು, ಮಹಿಳೆ ಹೀಗೆ ಪ್ರತಿದಿನ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಕ್ಕೆ ಅಮೇರಿಕಾದ ಮಾಜಿ ರಾಷ್ಟ್ರಪತಿ ಹಾಗೂ ನಮ್ಮ ಮಾಜಿ ರಾಷ್ಟ್ರಪತಿಗಳೂ ಆಗಮಿಸುವ ನಿರೀಕ್ಷೆಯಿದ್ದು ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ರಜತ ಜಯಂತಿಯ ಅಂಗವಾಗಿ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
ದಿ. 17 ರಂದು ನಗರದ ಬಿಪಿಎಸ್‍ಸಿ ಶಾಲಾ ಆವರಣದಲ್ಲಿ ಜರುಗಿದ ಪ್ರತಿಭಾ ಸಂಗಮ ಕಾರ್ಯಕ್ರಮದಲ್ಲಿ ಭಾಷಣ, ಚಿತ್ರಕಲೆ, ರಸಪ್ರಶ್ನೆ, ಹಗ್ಗ ಜಗ್ಗಾಟ, ಕೋಲಾಟ, ಭಜನೆ, ರಂಗೋಲಿ, ಸಮೂಹ ನೃತ್ಯ, ಗಾಯನ, ಕಥೆ ಹೇಳುವ ಸ್ಪರ್ಧೆ ಹೀಗೆ ನಾನಾ ಸ್ಪರ್ಧೆಗಳಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಉತ್ಸಾಹದಿಂದ ಭಾಗವಹಿಸಿದ್ದರು. ನಗರದ ಉತ್ಸಾಹಿ ಶಿಕ್ಷಕರಾದ ಕೆ.ಎಂ.ಸಿದ್ಧಲಿಂಗಯ್ಯ, ಜೋಳದರಾಶಿ ಪಂಪನಗೌಡ, ಶಿವೇಶ್ವರಗೌಡ, ಜೆ.ಎಂ.ಆರ್. ಬಸವರಾಜ, ಜಿ.ಜಿ.ಮಂಜುನಾಥ, ತಿಪ್ಪಾರೆಡ್ಡಿ, ಯು.ಆರ್. ರಮೇಶ, ಗಂಗಾಧರ ದುರ್ಗಂ, ಕೆ.ನಾಗರಾಜ, ಸಿ.ಕೆ. ಪ್ರಕಾಶ ಹಾಗೂ ಹಳ್ಳಿಮನೆ ದೊಡ್ಡ ಬಸಪ್ಪ ಅವರು ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಸಂಜೆ ನಡೆದ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ಜಿಲ್ಲಾ ಅಧ್ಯಕ್ಷ ಡಾ.ಜಿ.ಆರ್. ವಸ್ತ್ರದ್, ಬಳ್ಳಾರಿ ಜಿಲ್ಲ ಕಲಾವಿದರ ಸಂಘದ ಯಲ್ಲನಗೌಡ ಶಂಕರಬಂಡೆ, ಪ್ರತಿಭಾ ಸಂಗಮ ಸಂಚಾಲಕ ಅಡವಿಸ್ವಾಮಿ ವಿಜೇತರಿಗೆ ನಗದು ಬಹುಮಾನ ಸರ್ಟಿಫಿಕೇಟ್ ನೀಡಿದರು. ನಗರ ಸಂಚಾಲಕ ವೆಂಕಟೇಶ ಬಡಿಗೇರ, ಪ್ರವೀಣ ನಾಯಕ ಮತ್ತಿತರು ಕಾರ್ಯಕ್ರಮ ನಿರ್ವಹಿಸಿದರು.