ಹೊಸಪೇಟೆಗೆ ಕರಾವಳಿಯನ್ನು ತಂದು ನಿಲ್ಲಿಸಿದ ‘ಶಿವಶಕ್ತಿ ಗುಳಿಗ’ ಯಕ್ಷಗಾನ.
ಸಂಜೆವಾಣಿ ವಾರ್ತೆ
ಹೊಸಪೇಟೆ ಆ19: ಹೊಸಪೇಟೆಯ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ರಾತ್ರಿ ನಡೆದ ‘ಶಿವಶಕ್ತಿ ಗುಳಿಗ‘ ಯಕ್ಷಗಾನ ಕರಾವಳಿ ಕರ್ನಾಟಕದ ಕಲೆ, ಸಂಸ್ಕೃತಿ, ಭೂತಾರಾಧನೆ, ದೈವ ನರ್ತನ ಮೊದಲಾದ ವಿಶಿಷ್ಟ ಪರಂಪರೆಯನ್ನು ಹೊಸಪೇಟೆಯ ಜನರಿಗೆ ಪರಿಚಯಿಸುವಲ್ಲಿ ಸಫಲವಾಯಿತು.
ಕುಂದಾಪುರ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ನಡೆದ ಈ ಯಕ್ಷಗಾನ ‘ಗುಳಿಗ’ನ ಮಹಿಮೆಯನ್ನು ತೋರಿಸುವುದರ ಜತೆಗೆ, ಕರಾವಳಿ ಭಾಗದಲ್ಲಿ ಆಚರಣೆಯಲ್ಲಿರುವ ಸಂಪ್ರದಾಯದ ಮೇಲೆ ಗಾಢವಾದ ಬೆಳಕು ಬೀರುವಂತೆ ಮಾಡಿತು.
ರಾಘವೇಂದ್ರ ಮಯ್ಯ ಅವರ ಕಂಠಸಿರಿಯಲ್ಲಿ ಮೊಳಗಿದ ಯಕ್ಷಗಾನದ ಹಾಡುಗಳು ಕವಿಗೆ ಇಂಪು ನೀಡಿದರೆ, ರಾಜೇಶ್‌ ಬೈಕಾಡಿ ಅವರ ಗುಳಿಗನ ಪಾತ್ರ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತು. ಅವರ ಅಬ್ಬರ, ವೀರಾವೇಶಗಳನ್ನು ಕಂಡು ನಿಬ್ಬೆರಗಾದರು.
ಶಿವನ ಶಕ್ತಿ ರೂಪದಲ್ಲಿ ಜನಿಸಿದ ಗುಳಿಗ ತನ್ನ ಆರಾಧನೆಯನ್ನು ಜನರು ಮಾಡುತ್ತಿರಬೇಕು, ಅದಕ್ಕಾಗಿ ಕರಾವಳಿ ಭಾಗದ ರಾಜನಿಗೆ ಕಷ್ಟದ ಸರಮಾಲೆ ನೀಡಿ ಕೊನೆಗೆ ಗುಳಿಗನ ಮಹಿಮೆಯನ್ನು ಒಪ್ಪಿಕೊಳ್ಳುವ ಕಥಾನಕವನ್ನು ಈ ಯಕ್ಷಗಾನ ಪ್ರಸಂಗ ಒಳಗೊಂಡಿದೆ.
ಹಾಸ್ಯದ ಹೊನಲು: ನಾಲ್ಕು ಗಂಟೆ ಕಾಲ ನಡೆದ ಯಕ್ಷಗಾನದಲ್ಲಿ ವೀರಾವೇಶ, ಸ್ತ್ರೀವೇಶದ ಬಳುಕುವ ಕುಣಿತಗಳಿಗೆ ಕೊನೆಯೇ ಇರಲಿಲ್ಲ. ಅದಕ್ಕಿಂತಲೂ ಹೆಚ್ಚು ಗಮನ ಸೆಳೆದುದು ಹಾಸ್ಯದ ಹೊನಲು. ಸಮಕಾಲೀನ ವಿಚಾರಗಳನ್ನು ಸಹ ಹಾಸ್ಯ ಲೇಪನದಲ್ಲಿ ತೊಯ್ದು ತೊಟ್ಟಿಕ್ಕುವಂತೆ ಮಾಡಿದ ಕ್ಯಾದಗಿ ಮಹಾಬಲೇಶ್ವರ ಭಟ್ ಮತ್ತು ಉಳ್ಳೂರು ಶಂಕರ್ ನಾಯ್ಕ್ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು.
ಸ್ತ್ರೀವೇಶದಲ್ಲಿ ಮಾಧವ ನಾಗೂರು, ರವೀಂದ್ರ ಶೆಟ್ಟಿ ಹಕ್ಲಾಡಿ, ಕುಮಾರ ಅರಳಸುರುಳಿ ಗಮನ ಸೆಳೆದರು. ಭಾಗವತಿಕೆಯಲ್ಲಿ ಉಮೇಶ್ ಮರಾಠೆ, ಮದ್ದಳೆಯಲ್ಲಿ ರಮೇಶ್ ಭಂಡಾರಿ ಕಡತೋಕ, ಚೆಂಡೆಯಲ್ಲಿ ಗುರುರಾಜ ಪಡಿಯಾರ್ ಸಹಕರಿಸಿದರು. ಮುಮ್ಮೇಳದಲ್ಲಿ ಕೋಡಿ ವಿಶ್ವನಾಥ ಗಾಣಿಗ, ಚಂದ್ರಹಾಸ ಗೌಡ ಹೊಸಪಟ್ನ, ಪ್ರಸನ್ನ ಕುಮಾರ್ ದೇವಂಗಿ, ರಂಜಿತ್ ಕುಮಾರ್ ವಂಡ್ಸೆ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ರಾಜೇಶ್ ಬೈಕಾಡಿ, ಉಳ್ಳೂರು ನಾರಾಯಣ ನಾಯ್ಕ್, ಕುಮಾರ ವಿಘ್ನೇಶ್‌ ಚಾರ ಹೆಬ್ರಿ ಮಿಂಚಿದರು.
ನಗರದ  ಯಕ್ಷಗಾನ ಕಲಾಸಕ್ತರು ಮತ್ತು ಅಭಿಮಾನಿ ಸ್ನೇಹಿತರು ಹಾಗೂ ಜನನಿ ವಿವಿಧೋದ್ದೇಶ ಸಹಕಾರಿ ಸಂಘಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು.