ರಾಜ್ಯಪಾಲರು, ಬಿಜೆಪಿ-ಜೆಡಿಎಸ್ ವಿರುದ್ಧ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.19:– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರ ಮೂಲಕ ಕಿರುಕುಳ ನೀಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಕುತಂತ್ರ ರಾಜಕಾರಣ, ರಾಜ್ಯಪಾಲರ ಇಬ್ಬಗೆ ನೀತಿ ವಿರೋಧಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಮೈಸೂರು-ನಂಜನಗೂಡು ರಸ್ತೆಯ ಎಪಿಎಂಸಿ ರಿಂಗ್ ರೋಡ್ ಜಂಕ್ಷನ್‍ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಎಂ.ಕೆ.ಸೋಮಶೇಖರ್, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ದೇಶದ ಮಹಾನ್ ಸರ್ವಾಧಿಕಾರಿಗಳು. ಇವರನ್ನು ಬಿಟ್ಟು ಯಾರು ಸಹ ಬೆಳೆಯಬಾರದು, ವಿರೋಧಿಸಬಾರದು, ಪ್ರಶ್ನಿಸಬಾರದು ಎಂಬ ಮನಸ್ಥಿತಿ ಹೊಂದಿದ್ದಾರೆ. ಅಮಿತ್ ಶಾ ಮೂಲತಹ ಒಬ್ಬ ರೌಡಿ ಎಂದು ಸ್ವತಃ ಸಿಬಿಐ ಹಿಂದೆ ತಿಳಿಸಿದೆ. ನರೇಂದ್ರ ಮೋದಿ ಗುಜರಾತಿನ ನರಮೇಧ ಹತ್ಯೆಯ ರೂವಾರಿ ಎಂಬುದು ಜಗಜ್ಜಾಹೀರಾಗಿದೆ. ಇವರು ದೇಶದ ಎಲ್ಲಾ ರಾಜ್ಯಗಳ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಿ ದೇಶವ್ಯಾಪಿ ಬಿಜೆಪಿ ಸರ್ಕಾರ ತರಬೇಕು ಎಂಬ ಗುರಿ ಇಟ್ಟುಕೊಂಡಿದ್ದಾರೆ ಎಂದು ದೂರಿದರು.
ಚುನಾವಣೆ ಮೂಲಕ ದಕ್ಷಿಣ ಭಾರತದ ರಾಜ್ಯಗಳನ್ನು ಹಣಿಯಲು ಸಾಧ್ಯವಾಗಿಲ್ಲ. ಈಗಾಗಿ ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರಗಳಿಗೆ ಕಿರುಕುಳ ಕೊಡುವ ಕೆಲಸ ಪ್ರಾರಂಭಿಸಿದ್ದು ತಮಿಳುನಾಡು, ಕೇರಳ, ಪಶ್ಚಿಮಬಂಗಾಳದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಿಎಂಗಳಾದ ಸೊರೇನ್, ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಮೂಲಕ ಬಂಧಿಸಿದ್ದಾರೆ. ಕರ್ನಾಟಕದಲ್ಲೂ ಪದ್ಮರಾಜ್ ಎಂಬ ಅಧಿಕಾರಿಯನ್ನು ಇ.ಡಿಯವರು ಬಂಧಿಸಿ ಅವರಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರ ಹೆಸರು ಹೇಳುವಂತೆ ಒತ್ತಡ ಹೇರುತ್ತಿದ್ದಾರೆ.
ಈ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಿರುವುದು ಸಂವಿಧಾನದ ಉಲ್ಲಂಘನೆ. ವಿಚಾರಣೆ ಮಾಡುವ ಕೆಲಸ ಮಾಡಲೇ ಇಲ್ಲ. ಇದರಿಂದ ಯಾವ ತೊಂದರೆಯೂ ಸಿದ್ದರಾಮಯ್ಯ ಅವರಿಗೆ ಇಲ್ಲ. ಕೋರ್ಟ್‍ನಲ್ಲಿ ಇದು ತಿರಸ್ಕಾರ ಆಗಿ ಸತ್ಯಕ್ಕೆ ಜಯ ದೊರಕುವುದು ನಿಶ್ಚಿತ. ಸಿದ್ದರಾಮಯ್ಯನವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ಪ್ರಭಾವ ಬಳಸಿಲ್ಲ, ಕುಮ್ಮಕ್ಕು ಸಹ ನೀಡಿಲ್ಲ. ಹೀಗಾಗಿ ಇಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಆಗುವುದಿಲ್ಲ. ಸತ್ಯ ಹೊರಬಂದ ಮೇಲೆ ಜನ ಬಿಜೆಪಿಗೆ ಬುದ್ಧಿ ಕಲಿಸುತ್ತಾರೆ. ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಜನ ದಂಗೆ ಹೇಳುತ್ತಾರೆ. ಬಾಂಗ್ಲಾದೇಶದಂತೆ ಪರಿಸ್ಥಿತಿ ಭಾರತದಲ್ಲೂ ಉಂಟಾಗುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಶ್ರೀಧರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಕಾಂಗ್ರೆಸ್ ಮುಖಂಡ ರವಿಶಂಕರ್, ಮಾಜಿ ಪಾಲಿಕೆ ಸದಸ್ಯರುಗಳಾದ ಜೆ.ಗೋಪಿ, ಎಂ.ಸುನಿಲ್, ಆರ್.ಎಚ್.ಕುಮಾರ್, ವಿಶ್ವನಾಥ್, ಮಾಜಿ ಸೆನೆಟ್ ಸದಸ್ಯ ಮಾರ್ಬಳ್ಳಿ ಕುಮಾರ್, ರಮೇಶ್ ರಾಮಪ್ಪ, ಉತ್ತನಹಳ್ಳಿ ಶಿವಣ್ಣ, ಹರೀಶ್, ವಿಜಯ್ ಕುಮಾರ್, ಮೂರ್ತಿ, ಜಗದೀಶ್, ಮಹೇಂದ್ರ, ಮಹಮದ್ ಫಾರೂಕ್, ಭವ್ಯ, ವೀಣಾ, ಇಂದ್ರಮ್ಮ, ಚಂದ್ರಕಲಾ, ಮಲ್ಲಾಜಮ್ಮ, ಕಂಸಾಳೆ ರವಿ, ರಮೇಶ್ ರಾವ್, ರಾಘವೇಂದ್ರ ಉಲ್ಲಾಸ್,ರಾಕೇಶ್, ಧರ್ಮೇಂದ್ರ, ಜಯರಾಜ್, ಮಧುರಾಜ್, ಹುಚ್ಚೇಗೌಡ, ಶೇಖರ್, ಕುಮಾರ್ (ಕುಮ್ಮಿ), ಮಲ್ಲೇಶ್ ಮಲ್ಲ, ಚೇತನ್, ಮನು, ಪೈಲ್ವಾನ್ ಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.