ರಾಮಾಯಣ ನಮ್ಮ ಭಾರತದ ಕಣ್ಣು: ದತ್ತ ವಿಜಯಾನಂದ ತೀರ್ಥ ಶ್ರೀ
ಸಂಜೆವಾಣಿ ನ್ಯೂಸ್
ಮೈಸೂರು: ಆ.19:- ರಾಮಾಯಣ ನಮ್ಮ ಭಾರತದ ಕಣ್ಣು, ಶ್ರೀರಾಮನ ಆದರ್ಶ ಎಲ್ಲರಿಗೂ ಮಾದರಿ ಎಂದು ಅವಧೂತ ದತ್ತ ಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನುಡಿದರು.
ದತ್ತ ಪೀಠದ ಆವರಣದಲ್ಲಿರುವ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಆ.8ರಿಂದ ಪ್ರಾರಂಭವಾಗಿದ್ದ ಸಂಪೂರ್ಣ ಶ್ರೀಮದ್ ವಾಲ್ಮೀಕಿ ರಾಮಾಯಣ ಮಹಾಯಾಗದ ಮಹಾ ಪೂರ್ಣಾಹುತಿ ಕಾರ್ಯದಲ್ಲಿ ಪಾಲ್ಗೊಂಡು ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಒಮ್ಮೆಯಾದರೂ ಸಂಪೂರ್ಣ ರಾಮಾಯಣ ಪಾರಾಯಣ ಮಾಡಬೇಕು. ಭಾರತ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲಿ ಶ್ರೀರಾಮ ಎಂಬ ಹೆಸರು ಕೇಳಿದರೆ ಸಾಕು ಮೈ ನವಿರೇಳುತ್ತದೆ ಎಂದು ಹೇಳಿದರು.
ಲೋಕ ಕಲ್ಯಾಣಾರ್ಥವಾಗಿ ಮತ್ತು ವಿಶ್ವ ಶಾಂತಿಗಾಗಿ ಪ್ರಾರ್ಥಿಸಿ 11 ದಿನಗಳಿಂದ ಸಂಪೂರ್ಣ ರಾಮಾಯಣ ಪಾರಾಯಣ ಮಾಡಲಾಗಿದೆ. ನಮ್ಮ ಕರ್ನಾಟಕ, ನಮ್ಮ ದೇಶ ಹಾಗೂ ವಿಶ್ವದೆಲ್ಲೆಡೆ ಸದಾ ಶಾಂತಿ ಇರಬೇಕು ಎಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ಇಡೀ ನಾಡಿನಲ್ಲಿ ಕೊರೊನಾ ಬಾಧಿಸುತ್ತಿದ್ದಾಗ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಅಂದುಕೊಂಡಿದ್ದರು. ಪ್ರಾರಂಭದಲ್ಲಿ ಕೆಲ ವಿಘ್ನಗಳು ಬರಲಿವೆ ಎಂದು ಕೂಡ ಶ್ರೀಗಳು ತಿಳಿಸಿದ್ದರು. ನಾನು ಒಳಗೆ ರಾಮಾಯಣ ಪಾರಾಯಣ ಮಾಡಿಕೊಳ್ಳುತ್ತೇನೆ ನೀವು ಮುಂದೆ ಮಾಡಿ ಎಲ್ಲಾ ಸರಿಯಾಗಲಿದೆ ಎಂದು ಹೇಳಿದ್ದರು. ಅದರಂತೆ ಈಗ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ರಾಮಾಯಣ ಪಾರಾಯಣ ಆಗಿದೆ. ಇದಕ್ಕೆ ಈ ಎಲ್ಲ ಹೃತ್ವಿಕರು ಮುಖ್ಯ ಕಾರಣ ಎಂದು ತಿಳಿಸಿದರು.
ಹಿಂದೆ ಶತಶ್ಲೋಕಿ ರಾಮಾಯಣದಿಂದಲೇ ಶಾಲೆಗಳಲ್ಲಿ ನಮ್ಮ ಪಾಠಗಳು ಪ್ರಾರಂಭ ಆಗುತ್ತಿದ್ದವು. ವೇದ ಓದಿದವರು ರಾಮಾಯಣ ಗೊತ್ತಿಲ್ಲ ಎಂದರೆ ಚೆನ್ನಾಗಿರುವುದಿಲ್ಲ. ನಮ್ಮ ರಾಮಾಯಣ ಭಾರತದ ಕಣ್ಣು ಇದ್ದಂತೆ. ಎಲ್ಲರೂ ಒಮ್ಮೆಯಾದರು ರಾಮಾಯಣ ಓದಬೇಕು ಅದರಲ್ಲಿನ ಸಾರ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಮಾಯಣ ಪಾರಾಯಣ ಹಾಗೂ ಶ್ರೀ ಮದ್ರಾಮಾಯಣ ಯಾಗ ಎರಡೂ ಯಶಸ್ವಿಯಾಗಿದೆ. 24,000 ಆಹುತಿಗಳನ್ನು ಸಮರ್ಪಣೆ ಮಾಡಲಾಗಿದೆ. ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರವನ್ನು 52 ಲಕ್ಷ ಪೂರ್ತಿ ಮಾಡಲಾಗಿದೆ ಎಂದು ತಿಳಿಸಿದರು.
ರಾಮಾಯಣವನ್ನು ಅಚ್ಚುಕಟ್ಟಾಗಿ ನಮ್ಮ ಆಶ್ರಮದ ವೇದ ಶಾಲೆಯ ಉಪಾಧ್ಯಾಯರು ವಿದ್ಯಾರ್ಥಿಗಳು ಓದಿದ್ದಾರೆ. ಶ್ರೀ ವಂಶಿಕೃಷ್ಣ ಘನಪಾಠಿ ಅವರು ಇವೆಲ್ಲದಕ್ಕೂ ಆಧಾರಸ್ತಂಭವಾಗಿ ನಿಂತರು ಎಂದು ಎಲ್ಲರನ್ನು ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿ ಶ್ಲಾಘಿಸಿದರು.
ಬೆಳಗ್ಗೆ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಿಂದ ಸೀತಾರಾಮ ಆಂಜನೇಯ ಸಮೇತ ಉತ್ಸವ ಮೂರ್ತಿಯನ್ನು ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿವರೆಗೆ ತರಲಾಯಿತು. ಶ್ರೀಗಳು ಈ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.