ಸಾರಾ ಕಾದಂಬರಿ ಬಿಡುಗಡೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.19:– ನಗರದ ಹೆರಿಟೇಜ್‍ಹೌಸ್‍ನಲ್ಲಿ ಅನುಷ್ ಎ.ಶೆಟ್ಟಿ ಅವರ ಐದನೇ ಕಾದಂಬರಿ ಸಾರಾ ಅನ್ನು ನಟ ಪ್ರಕಾಶ್ ರಾಜ್ ಭಾನುವಾರ ಬಿಡುಗಡೆ ಮಾಡಿದರು.
ನಂತರ ಮಾತನಾಡಿ, ಯಾವುದೇ ಕೃತಿ ಆನಂದವನ್ನಷ್ಟೇ ಅಲ್ಲ ಅರಿವನ್ನೂ ನೀಡಬೇಕು. ಸಾರಾ ಕಾದಂಬರಿ ಇವೆರಡರ ಬೆಸುಗೆ. ಹೀಗಾಗಿಯೇ ಹೈದರಾಬಾದ್‍ಗೆ ನಾನು ಪ್ರಯಾಣಿಸುವಾಗ ಪುಸ್ತಕ ತೆರೆದೆ, ಕದಲಿಸದೇ ಓದಿಸಿಕೊಂಡಿತು ಎಂದು ಅನುಭವ ಹಂಚಿಕೊಂಡರು.
ಬರವಣಿಗೆಯನ್ನು ದೃಶ್ಯವಾಗಿ ಕಣ್ಣಿಗೆ ಕಟ್ಟುವಂತೆ ಮಾಡುವ ಕೌಶಲ ಲೇಖಕನಿಗಿರಬೇಕು. ಈ ಕೃತಿ ದೃಶ್ಯದಲ್ಲಿ ಸೌಂದರ್ಯವನ್ನು ಅನಾವರಣಗೊಳಿಸುತ್ತಲೇ ವಾಸ್ತವದೆಡೆಗೆ ಓದುಗರನ್ನು ಮತ್ತೆ ಕರೆತರುತ್ತದೆ. ಕೃತಿಗಿಂತ ಕೃತಿಕಾರನನ್ನು ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆಂಬ, ಓದಬೇಕೆಂಬ ಕುತೂಹಲವನ್ನು ಈ ಕಾದಂಬರಿಯು ಮೂಡಿಸಿದೆ ಎಂದು ವಿಶ್ಲೇಷಿಸಿದರು. ದೂರದಿಂದ ನೋಡಿದಾಗ ದೊಡ್ಡವರಂತೆ ಕಾಣುತ್ತೇವೆ. ಆದರೆ, ನಾವು ಸಣ್ಣವರೇ. ಕೆಲ ವರ್ಷದ ಹಿಂದೆ ಮೈಸೂರಿನಲ್ಲಿ ಒಗ್ಗರಣೆ ಸಿನಿಮಾ ಮಾಡುವಾಗ ಬ್ಯಾಂಡ್ ಮಾಡುತ್ತಿದ್ದೇವೆಂದು ಒಬ್ಬ ಹುಡುಗ ಪರಿಚಯಿಸಿಕೊಂಡಿದ್ದ. ಈಗ ನಿರ್ದಿಗಂತ ಮೂಲಕ ರಂಗಭೂಮಿಗೆ ನಾನು ಮರಳಿದಾಗ ಅದೇ ಹುಡುಗ ಅನುಷ್ ಜೊತೆಯಾಗಿದ್ದಾರೆ ಎಂದರು.
ಸಂಗೀತ, ಸಾಹಿತ್ಯ, ರಂಗಭೂಮಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಕಾಳಜಿ, ಪ್ರೀತಿಯೊಂದಿಗೆ ಬಹು ಆಯಾಮಗಳಲ್ಲಿ ಕೆಲಸ ಮಾಡುವ ಸುಂದರ ಗೆಳೆಯ ಅನುಷ್ ತಂಗಾಳಿಯಂಥ ಪ್ರತಿಭೆ. ಕಾದಂಬರಿಯಲ್ಲಿ ಬರುವ ರೋಲ್ಯಾಂಡ್ ಸಾರಾಳಂತೆ ಎಲ್ಲರೊಂದಿಗೆ ಬೆರೆತು ಕಟ್ಟುವ ಗುಣವಿದೆ. ಅವರು ನಿರ್ದಿಗಂತ ಎಂಬ ಭರವಸೆಗೆ ಕೃತಿಯನ್ನು ಅರ್ಪಿಸಿರುವುದು ನನ್ನಲ್ಲಿ ಕಣ್ಣೀರು ತರಿಸಿತು ಎಂದು ಭಾವುಕರಾದರು.
ರಂಗಕರ್ಮಿ ಶ್ರೀಪಾದಭಟ್ ಮಾತನಾಡಿ, ಲೇಖಕರು ಕೃತಿಗಳ ಪದಬಳಕೆಯಲ್ಲಿ ತೋರುವ ಚಿತ್ರಕಶಕ್ತಿ, ಶೈಲಿಯನ್ನು ನೋಡಿದಾಗ ರಂಗಪಠ್ಯದಂತೆಯೇ ಕಾಣುತ್ತದೆ ಎಂದರು.