ಬಾಂಗ್ಲಾದ ಹಿಂದೂಗಳನ್ನು ರಕ್ಷಿಸುವಂತೆ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.19: ನೆರೆಯ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಸಂಘಟಿತ ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯಗಳನ್ನು ಹುಣಸೂರಿನ ದೇವನೂರು ಮಾಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಸನಾತನ ಧರ್ಮರತ್ನಾಕರ ಡಾ.ಮಾದೇಶ್ ಗುರೂಜಿ ಖಂಡಿಸಿದ್ದು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಅಗತ್ಯ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರನ್ನು ಒತ್ತಾಯಿಸಿದರು.
ತಾಲೂಕಿನ ಬೆಡದಹಳ್ಳಿ ಗ್ರಾಮದ ಪಂಚಭೂತೇಶ್ವರ ಮಠದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬಾಂಗ್ಲಾದ ಹಿಂದೂಗಳ ರಕ್ಷಣೆಗೆ ಅಂತರರಾಷ್ಟ್ರೀಯ ಸಮುದಾಯ ಧ್ವನಿಯತ್ತಬೇಕು. ಈ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ರಾಜತಾಂತ್ರಿಕ ಕಾರ್ಯತಂತ್ರಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಂತರ ರಾಷ್ಟ್ರೀಯ ಭಯೋತ್ಪಾದನೆಯ ಒಂದು ಭಾಗ. ಯಾವುದೇ ದೇಶದಲ್ಲಿಯೂ ಮತೀಯ ಅಲ್ಪಸಂಖ್ಯಾತರ ಮೇಲೆ ಧಾರ್ಮಿಕ ದಬ್ಬಾಳಿಕೆಗಳು ನಡೆಯಬಾರದು. ಮಾನವೀಯತೆಯನ್ನು ಮೀರಿದ ದೌರ್ಜನ್ಯಗಳು ಬಾಂಗ್ಲಾದಲ್ಲಿ ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಹಿಂದೂಗಳ ರಕ್ಷಣೆ ಮಾಡದೆ ಕೈ ಕಟ್ಟಿ ಕುಳಿತಿದೆ. ಅಲ್ಲಿನ ಹಿಂದೂಗಳಿಗೆ ಜಾಗತಿಕ ರಕ್ಷಣೆ ಬೇಕಾಗಿದೆ. ಭಾರತ, ಪಾಕಿಸ್ಥಾನ, ಬಾಂಗ್ಲಾದೇಶದ ಹಿಂದೂಗಳು ಆಯಾ ನೆಲದ ಮೂಲ ಧರ್ಮೀಯರು. ಅವರ ನೆಲದಲ್ಲಿಯೇ ಅವರ ಮೇಲೆ ದಬ್ಬಾಳಿಕೆ ನಡೆದರೆ ಅವರು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದ ಮಾದೇಶ್ ಗುರೂಜಿ ಮೂಲ ಸನಾತನ ಧರ್ಮೀಯರ ಮೇಲೆ ಇತರ ಧರ್ಮೀಯರು ನಡೆಸುವ ಧಾರ್ಮಿಕ ದೌರ್ಜನ್ಯ ನಿಲ್ಲಬೇಕೆಂದು ಆಗ್ರಹಿಸಿದರು.
ಜಗತ್ತಿನ ಯಾವುದೇ ಭಾಗದಲ್ಲಿಯಾದರೂ ಹಿಂದೂಗಳ ಮೇಲೆ ದಬ್ಬಳಿಕೆ ನಡೆದರೆ, ನಮ್ಮ ದೇವಾಲಯಗಳು ನಾಶಗೊಂಡರೆ ನಮ್ಮ ಮಠಾಧೀಶರು ಧ್ವನಿಯೆತ್ತಬೇಕು. ಬಾಂಗ್ಲದಲ್ಲಿ ಸನಾತನ ಧರ್ಮೀಯರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದರೂ ನಮ್ಮ ಮಠಾಧೀಶರು ಮೌನವಾಗಿದ್ದಾರೆ. ಇದು ಸರಿಯಲ್ಲ ಎಂದರು.
ಸಿದ್ದರಾಮಯ್ಯ ಪರ ಬ್ಯಾಟಿಂಗ್: ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ತನಿಖೆಗೆ ಒಪ್ಪಿಗೆ ನೀಡಿದ ರಾಜ್ಯಪಾಲರ ಕ್ರಮವನ್ನು ಖಂಡಿಸಿದ ಡಾ.ಮಾದೇಶ್ ಗುರೂಜಿ ಇದೊಂದು ರಾಜಕೀಯ ಪಿತೂರಿ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜಕೀಯ ಒಳಸಂಚು ಇದಾಗಿದ್ದು ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ. ಆದರೆ ತಮ್ಮ ವಿರುದ್ದ ಆರೋಪದ ತನಿಖೆಯನ್ನು ಎದುರಿಸಿ ಆರೋಪ ಮುಕ್ತರಾಗಲಿ ಎಂದರು.
ಸಿದ್ದರಾಮಯ್ಯ ನಾಡಿನ ದೀನ, ದಲಿತರು ಮತ್ತು ಅಲ್ಪಸಂಖ್ಯಾತರ ಪರವಾದ ರಾಜಕಾರಣಿ. ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ಬಡವರ ನೆರವಿಗೆ ನಿಂತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡೆ ಖಂಡನೀಯ. ರಾಜ್ಯದಲ್ಲಿ ಬಡವರ ನಾಯಕನ ವಿರುದ್ದ ಸಲ್ಲದ ಅಪಪ್ರಚಾರಗಳನ್ನು ನಡೆಸುತ್ತಾ ಪರಿಶುದ್ದ ರಾಜಕಾರಣಕ್ಕೆ ಕಳಂಕ ಹಚ್ಚುವ ಪ್ರಯತ್ನ ನಡೆಸಲಾಗಿದೆ. ಸಿದ್ದರಾಮಯ್ಯು ವಿರುದ್ದ ಆರೋಪ ಮಾಡುತ್ತಿರುವವರ ವಿರುದ್ದವೂ ಬ್ರಹ್ಮಾಂಡದಷ್ಟು ಆರೋಪಗಳಿವೆ. ಸಿದ್ದರಾಮಯ್ಯ ಅವರ ವಿರುದ್ದ ನಡೆಸುತ್ತಿರುವ ದಾಳಿ ನಾಡಿನ ಸಮಸ್ತ ದೀನ, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದಾಳಿಯಾಗಿದ್ದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಯಲಿದೆ ಎಂದು ಡಾ. ಮಾದೇಶ್ ಗುರೂಜಿ ಎಚ್ಚರಿಸಿದರು.
ಬೆಡದಹಳ್ಳಿ ಪಂಚಭೂತೇಶ್ವರ ಪೀಠದ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ, ಮಳವಳ್ಳಿ ತಾಲೂಕು ಸಿದ್ದರಾಮೇಶ್ವರ ಪೀಠದ ಸಿದ್ದರಾಮೇಶ್ವರ ಶಿವಯೋಗಿ ಸ್ವಾಮೀಜಿಗಳು ಸುದ್ದಿಗೋಷ್ಠಿಯಲ್ಲಿದ್ದು ಮಾತನಾಡಿದರು.