ಸಿಎಂ ವಿರುದ್ದ ರಾಜ್ಯಪಾಲರ ನಿರ್ಣಯ ಖಂಡಿಸಿ ತಾಲೂಕು ಕುರುಬರ ಸಂಘದಿಂದ ಪಂಜಿನ ಮೆರವಣಿಗೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.19- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವುದನ್ನು ಖಂಡಿಸಿ ತಾಲೂಕು ಕುರುಬರ ಸಂಘದ ವತಿಯಿಂದ ನಗರದಲ್ಲಿ ಭಾನುವಾರ ಸಂಜೆ ಪಂಜಿನ ಮೆರವಣಿಗೆ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಉಮೇಶ್ ಎಸ್‍ಪಿಕೆ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಪಂಜು ಹಿಡಿದು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ತೊಲಗಲಿ ತೊಲಗಲಿ ರಾಜ್ಯಪಾಲರು ತೊಲಗಲಿ, ಬಿಜೆಪಿ ಜೆಡಿಎಸ್ ಏಜೆಂಟ್ ರಾಜ್ಯಪಾಲರಿಗೆ ಧಿಕ್ಕಾರ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಗೆ ಧಿಕ್ಕಾರ, ಸಿದ್ದರಾಮಯ್ಯಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಉಮೇಶ್ ಎಸ್‍ಪಿಕೆ ಮಾತನಾಡಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಯಾವುದೇ ಗುರುತರವಾದ ಆರೋಪಗಳು ಇಲ್ಲದಿದ್ದರು ಸಹ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಅವರ ವಿರುದ್ಧ ಪ್ರಕರಣ ದಾಖಲಿಸಲು ಪೂರ್ವಾನುಮತಿ ನೀಡಿರುವುದು ಖಂಡನೀಯ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 40 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಹಿಂದುಳಿದ ವರ್ಗದವರು ಎಂಬ ಏಕೈಕ ಕಾರಣಕ್ಕೆ ಅವರ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಿವೆ. ಬಿಜೆಪಿ ಜೆಡಿಎಸ್ ನಾಯಕರು ಮಾಡುತ್ತಿರುವ ಆರೋಪಗಳು ಶುದ್ದ ಸುಳ್ಳು. ಕೇಂದ್ರ ಸರ್ಕಾರ ಬಿಜೆಪಿಯೇತರ ಸರ್ಕಾರಗಳಿಗೆ ನಿರಂತರ ತೊಂದರೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿವೆ. ರಾಜ್ಯಪಾಲರು ಕೇಂದ್ರ ಸರ್ಕಾರ ಕೈಗೊಂಬೆಯಾಗಿದ್ದಾರೆ. ಕೂಡಲೇ ರಾಜ್ಯಪಾಲರು ಅನುಮತಿ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಕುರುಬರ ಸಂಘದಿಂದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಕುರುಬರ ಸಂಘದ ಗೌರವ ಅಧ್ಯಕ್ಷ ಬೆಳ್ಳೇಗೌಡ, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಚಿಕ್ಕಮಹದೇವು, ಸಂಘದ ಮುಖಂಡರಾದ ನಲ್ಲೂರು ರಾಜಶೇಖರ್, ಸುಬ್ಬೇಗೌಡ, ಗೋವಿಂದ, ಹಳೇಪುರ ಮಹೇಶ್, ಮಹದೇವಸ್ವಾಮಿ ಕೆಕೆಹುಂಡಿ, ಕರಿನಂಜನಪುರ ಸ್ವಾಮಿ, ಶಿವಪುರ ಶಿವಸ್ವಾಮಿ, ಮರಿಸ್ವಾಮಿ, ಮಂಜು, ರಾಜು, ರೇವಣ್ಣ, ರಾಜೇಶ್, ಬೀರೇಗೌಡ, ಸುಬ್ಬೇಗೌಡ, ಚಿಕ್ಕರಾಜು, ಡಿ.ಎಸ್.ಕುಮಾರ್, ಶಿವಕುಮಾರ್, ಚನ್ನೇಗೌಡ, ಬಸವಣ್ಣ, ಮಹದೇವ್, ಪುನೀತ್, ನಂದಕುಮಾರ್, ಚಾ.ನಗರ ಮಹೇಶ್ ಇತರರು ಭಾಗವಹಿಸಿದ್ದರು.