ವಾರಂಟ್ ಆರೋಪಿಯ ಬಂಧನ

ಪುತ್ತೂರು : ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ನಗರದ ಚೇತನ ಆಸ್ಪತ್ರೆ ಬಳಿಯ ನಿವಾಸಿ ಮಹಮ್ಮದ್ ಸಾದಿಕ್ ಯಾನೆ ಸಾದಿಕ್ ಬಂಧಿತ ಆರೋಪಿ.
ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ೨೦೧೮ರಲ್ಲಿ ನಡೆದಿದ್ದ ಕಳವು ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಮಹಮ್ಮದ್ ಸಾದಿಕ್ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನಲೆಯಲ್ಲಿ ನ್ಯಾಯಾಲಯ ಆತನ ಬಂಧನಕ್ಕೆ ವಾರಂಟ್ ಜಾರಿಗೊಳಿಸಿತ್ತು.
ನ್ಯಾಯಾಲಯದ ವಾರಂಟ್ ಆದೇಶದ ಮೇರೆಗೆ ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಜೆಜೆ ಅವರ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್ ಸಿಬ್ಬಂದಿ ವಸಂತ ಗೌಡ ಮತ್ತು ಬಸವರಾಜ್ ಅವರು ಆರೋಪಿಯನ್ನು ಬಿಸಿ ರೋಡ್‌ನಲ್ಲಿ ಪತ್ತೆ ಮಾಡಿ ಬಂಧಿಸಿ ಕರೆತಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.