ಸರ್ಕಾರಿ ಮಹಿಳಾ ಪ್ರ.ದರ್ಜೆ ಕಾಲೇಜು ವರ್ಷ ಕಳೆದರೂ ಕಾಮಗಾರಿ ಇಲ್ಲ-ಶಾಸಕ ಅಶೋಕ್ ರೈ ‘ತರಾಟೆ’


ಪುತ್ತೂರು: ಪುತ್ತೂರಿನ ಸರ್ಕಾರಿ ಪ್ರಥಮ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಆದರೆಜಾಗದ ಸಮಸ್ಯೆ ಉಂಟಾಗಿತ್ತು. ಇದೀಗ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಿ ವರ್ಷ ಕಳೆದಿದೆ. ಇನ್ನೂ ಕಾಮಗಾರಿ ಆರಂಭವಾಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.
ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಕ್ಷಣ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು. ಕಾಲೇಜಿನ ಅಭಿವೃದ್ಧಿ ಸಮಿತಿಯವರು ಕಾಮಗಾರಿಯ ವೇಗವರ್ಧನೆಗೆ ಪ್ರಯತ್ನ ಮಾಡಬೇಕು ಎಂದರು.
ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭದಲ್ಲಿಯೇ ಸಮಸ್ಯೆಗೆ ಸಿಲುಕಿತ್ತು. ಅದಕ್ಕೆ ಸಮರ್ಪಕವಾದ ಸ್ವಂತ ಕಟ್ಟಡ ಸಿಕ್ಕಿರಲಿಲ್ಲ. ಜೈಲು, ತಹಶೀಲ್ದಾರ್ ಕಚೇರಿ ಜಾಗದಲ್ಲಿ ಕಾಲೇಜು ಕಾರ್ಯನಿರ್ವಹಿಸುವುದಲ್ಲ. ಈಗ ಬೇರೆ ಜಾಗ ಹುಡುಕಿ ಬೊಳುವಾರು ಶಾಲೆಯ ಬಳಿ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ ಶಿಲಾನ್ಯಾಸ ನೆರವೇರಿಸಿ  ವರ್ಷ ಕಳೆದಿದೆ. ಅನಂತರದ ಸರ್ಕಾರ ಮಟ್ಟದಲ್ಲಿ ಅನುದಾನ ಹೆಚ್ಚಳ ಮಾಡಿ ಒಂದೇ ಟೆಂಡರ್ ರೂ. ೫.೩೦ ಕೋಟಿಗೆ ನಿಗದಿ ಮಾಡಲಾಗಿದೆ. ಆದರೆ ಕೆಲಸ ಯಾಕೆ ಆರಂಭ ಮಾಡಿಲ್ಲ ಎಂದು ಶಾಸಕ ಅಶೋಕ್ ರೈ ಪ್ರಶ್ನಿಸಿದರು.
ಮರು ಯೋಜನಾ ವರದಿಗೆ ೨೦೨೪ ಫೆಬ್ರವರಿ ತಿಂಗಳಲ್ಲಿ ಅನುಮತಿ ಲಭಿಸಿ ಟೆಂಡರ್ ಪ್ರಕ್ರಿಯೆ ಮಾಡಲು ಸೂಚನೆ ಬಂದಿತ್ತು. ಆದರೆ ಅಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಕಾರಣ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಜೂನ್ ತಿಂಗಳಲ್ಲಿ ವರ್ಕ್ ಆರ್ಡರ್ ಆಗಿದೆ. ಕಳೆದ ತಿಂಗಳು ಸಮತಟ್ಟು ಮಾಡುವ ಕೆಲಸ ಆರಂಭಿಸಲಾಗಿದೆ. ಅನಂತರ ಮಳೆ ಜೋರಾಗಿದ್ದ ಕಾರಣ ಕೆಲಸ ಮುಂದುವರೆಸಲು ಸಾಧ್ಯವಾಗಿಲ್ಲ. ೧೧ ತಿಂಗಳ ಅವಧಿಯನ್ನು ಕಾಮಗಾರಿ ಮುಗಿಸಲು ನೀಡಲಾಗಿದೆ ಎಂದು ಸಂಬಂಧಪಟ್ಟ ಎಂಜಿನಿಯರ್ ಮಾಹಿತಿ ನೀಡಿದರು. ಮಾರ್ಕಿಂಗ್ ಕೆಲಸಗಳನ್ನು ಮಾಡಲಾಗಿದ್ದು, ೧೧ ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರೊ. ಝೇವಿಯರ್ ಡಿಸೋಜ, ಪ್ರೊ. ಶ್ರೀಧರ್ ರೈ ಎಚ್., ಪ್ರೇಮಲತಾ ಜೆ. ರೈ, ಕೆ. ಸೂರಜ್ ಶೆಟ್ಟಿ, ರಾಘವೇಂದ್ರ, ಡಾ. ಶ್ರೀಪ್ರಕಾಶ್, ಕೆ.ಎಂ. ಇಸ್ಮಾಯಿಲ್, ಸಿಲ್ವೆಸ್ಟರ್ ಡಿಸೋಜ, ಜಯಂತ್ ಭಂಡಾರಿ, ಈಶ್ವರ್ ಬೆಡೇಕರ್, ಹರಿಣಾಕ್ಷಿ ಜೆ. ಶೆಟ್ಟಿ, ಸ್ವಾತಿ ಜೆ. ರೈ, ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ರಾಜಾರಾಂ, ಎಂಜಿನಿಯರ್ ಪ್ರದೀಪ್, ಕಾಂಟ್ರಾಕ್ಟರ್ ಆಶ್ರಫ್ ಮೊದಲಾದವರು ಉಪಸ್ಥಿತರಿದ್ದರು.