ಭೂಸಂತ್ರಸ್ಥರ ರೈತರೊಂದಿಗೆ ಮಾತುಕತೆಗೆ ಒತ್ತಾಯ
ಸಂಜೆವಾಣಿ ವಾರ್ತೆ
ಬಳ್ಳಾರಿ,ಆ 18- ತಾಲೂಕಿನ ಕುಡಿತಿನಿ ಹರಗಿನಡೋಣಿ, ವೇಣಿ ವೀರಾಪುರ, ಜಾನಕುಂಟೆ, ಕೊಳಗಲ್, ಮತ್ತು ಸಿದ್ದಮ್ಮನಹಳ್ಳಿ, ಯರಂಗಳಿಗಿ ಗ್ರಾಮಗಳಲ್ಲಿರುವ ರೈತರ ಜಮೀನನ್ನು ಕೈಗಾರಿಕ ಅಭಿವೃದ್ಧಿ ಹೆಸರಲ್ಲಿ ಕೆ.ಐ.ಎ.ಡಿ.ಬಿ. ಮೂಲಕ 2010 ರಲ್ಲಿ ಬಲವಂತವಾಗಿ ವಶಪಡಿಸಿಕೊಳ್ಳಲಾಗಿದೆ. ಕೂಡಲೇ ಭೂಸಂತ್ರಸ್ಥರ ರೈತರೊಂದಿಗೆ ಮಾತುಕತೆ ನಡೆಸುವಂತೆ  ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿರುವ ಕುಡುತಿನಿಯ ಭೂ ಸಂತ್ರಸ್ತ ಹೋರಾಟ ಸಮಿತಿ ಒತ್ತಾಯಿಸಿದೆ
ಅರ್ಷಲರ್ ಮಿತ್ತಲ್‌ಗಾಗಿ 5368.83 ಎಕರೆ, ಬ್ರಹ್ಮಣಿ (ಉತ್ತಮ್ ಗಾಲ್ವಾ ಫೆರೋಸ್ ಲಿ.,)ಗಾಗಿ 4761.99 ಎಕರೆ, ಎನ್.ಎಮ್.ಡಿ.ಸಿಗಾಗಿ 2744.22 ಎಕರೆ, ಒಟ್ಟು 12875.04 ಎಕರೆ ಜಮೀನ್ನು ವಶಪಡಿಸಿಕೊಂಡಿದ್ದಾರೆ. ಹೀಗೆ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ನ್ಯಾಯವಾದ ಭೂ ಬೆಲೆ ಕೊಡದೆ ರೈತರನ್ನು ವಂಚಿಸಲಾಗಿದೆ. ಅಲ್ಲದೆ ವಶಪಡಿಸಿಕೊಂಡು ೧೪ ವರ್ಷಗಳಾದರು ಕಾರ್ಖಾನಗಳನ್ನು ಪ್ರಾರಂಭಿಸಿಲ್ಲ. ಇದರಿಂದ ರೈತರ ಮಕ್ಕಳು ಹಾಗೂ ಸಾರ್ವಜನಿಕರು ಉದ್ಯೋಗದಿಂದ ವಂಚಿತರಾಗಿದ್ದಾರೆ.
ಈ ಬಗ್ಗೆ ಕಳೆದ 608 ದಿನಗಳಿಂದ ಭೂಸಂತ್ರಸ್ಥ ರೈತರು ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ ಇದುವರೆಗೆ ಸಂತ್ರಸ್ತರ ಬೇಡಿಕೆಗಳು ಈಡೇರಿಲ್ಲ. ಈ ಬಗ್ಗೆ ಈ ಹಿಂದೆ ಬೆಳಗಾಂ ನಲ್ಲಿ ನಡೆದ ವಿಧಾನ ಸಭೆ ಅಧಿವೇಶನದ (14.12.2023) ಸಂದರ್ಭದಲ್ಲಿ ತಮ್ಮ ಘನ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀಯುತ ಎಂ.ಬಿ.ಪಾಟೀಲ್, ಈ ಭಾಗದ ಸಂಸದರು ಇ.ತುಕಾರಾಮ್, ಅಲ್ಲದೆ ಕೆ.ಐ.ಎ.ಡಿ.ಬಿ ಅಧಿಕಾರಿಗಳು, ಬಳ್ಳಾರಿ ಜಿಲ್ಲಧಿಕಾರಿಗಳ ಉಪಸ್ತಿತಿಯಲ್ಲಿ ಸಭೆ ನಡೆಸಿರುವುದು ತಮಗೆ ತಿಳಿದ ವಿಷಯವಾಗಿದೆ.
ಸಭೆಯಲ್ಲಿ ತಾವುಗಳು ಮೂರು ತಿಂಗಳಲ್ಲಿ ಇನ್ನೊಂದು ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದೀರಿ. ಆದರೆ, ಇದುವರೆಗೂ ಯಾವುದೇ ಕ್ರಮ ಜಾರಿಗೊಳ್ಳದಿರುವುದು ನೋವಿನ ಸಂಗತಿಯಾಗಿದೆ. ಅದಲ್ಲದೇ ದಿನಾಂಕ 06.08.2024 ರಂದು ಕುಡತಿನಿ ಹರತಾಳ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ತಮ್ಮ ಗಮನಕ್ಕೆ ತಂದಿದ್ದೇವೆ. ತಾವು ದಯಮಾಡಿ ನಮ್ಮ ಮನವಿಯನ್ನು ತುರ್ತಾಗಿ ಪರಿಗಣಿಸಿ ರೈತಪರವಾದ ಕ್ರಮವನ್ನು ತಕ್ಷಣ ಜಾರಿಗೊಳಿಸಬೇಕೆಂದು ತಮ್ಮಲ್ಲಿ ಒತ್ತಾಯಿಸುತ್ತೇವೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮಹಿಳಾ ರೈತ ಮುಖಂಡರಾದ ಮಲ್ಲಮ್ಮ, ಶಿವಮ್ಮ, ನಾಗಮ್ಮ, ಬಸಮ್ಮ, ಪಾರ್ವತಮ್ಮ ಮತ್ತಿತರರು ಉಪಸ್ಥಿತರಿದ್ದರು