ರಾಜ್ಯಪಾಲರ ಪಕ್ಷಪಾತಿ ಧೋರಣೆ ಖಂಡನೀಯ: ಡಾ.ಗಾದಿಲಿಂಗನಗೌಡ
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.18: ವಿವಾದವೇ ಅಲ್ಲದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಪಕ್ಷಪಾತಿ ನಡೆ ಖಂಡನೀಯ ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ ಹೇಳಿದರು.
ನಗರದ ಗಡಿಗಿ ಚನ್ನಪ್ಪ (ರಾಯಲ್) ವೃತ್ತದಲ್ಲಿ  ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿಯನ್ನು ಬೇಷರತ್ತಾಗಿ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್; ಸಿದ್ದರಾಮಯ್ಯ ಅವರು ಯಾವುದೇ ಕಳಂಕ ಇಲ್ಲದ ನಾಯಕ, ಅವರ ವಿರುದ್ಧ ಅನಗತ್ಯವಾಗಿ ತನಿಖೆಗೆ ಅನುಮತಿ ನೀಡಲಾಗಿದೆ, ರಾಜ್ಯಪಾಲರ ನಡೆಯ ವಿರುದ್ಧ ನಮ್ಮ ಪ್ರತಿಭಟನೆಯಾಗಿದೆ, ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಪ್ರತಿಭಟನೆ ನಡೆಯಲಿವೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಷಡ್ಯಂತ್ರ ನಡೆಸಿರುವ ಬಿಜೆಪಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿದಾನಂದಪ್ಪ ಮಾತನಾಡಿ; ಸಿದ್ದರಾಮಯ್ಯ ಅವರು ಬಡವರ ಪರ ಇರುವ ನಾಯಕ, ಅವರು ಹಾಗೂ ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳಿಂದಾಗಿ ಜನರ ಬದುಕು ಹಸನಾಗಿದೆ. ಇದನ್ನು ಕಂಡು ಬಿಜೆಪಿ ನಾಯಕರಿಗೆ ಸಹನೆ ಆಗುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದರು.
ಹತ್ತು ತಿಂಗಳಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರ ಬಾಕಿ ಇಟ್ಟಿರುವ ರಾಜ್ಯಪಾಲ ಗೆಹ್ಲೋಟ್ ಸಿಎಂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಬ್ಲಾಕಮೇಲರ್ ಒಬ್ಬನ ದೂರಿಗೆ ತಕ್ಷಣ ಕಾರ್ಯ ಪ್ರವೃತ್ತರಾಗರುವುದು ಅವರ ಪಕ್ಷಪಾತಿ ಧೋರಣೆಯ ಪ್ರತೀಕ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಡಿಎಸ್ಸೆಸ್ ರಾಜ್ಯ ಸಂಚಾಲಕ ಎ.ಮಾನಯ್ಯ, ಜಿಲ್ಲಾ ವಕ್ಫ್ ಅಧ್ಯಕ್ಷ ಹುಮಾಯೂನ್ ಖಾನ್, ಕಾಂಗ್ರೆಸ್ ಹಿರಿಯ ಮುಖಂಡರಾದ ಕಲ್ಲುಕಂಭ ಪಂಪಾಪತಿ, ಅರುಣಕುಮಾರ್, ವೆಂಕಟೇಶ ಹೆಗಡೆ, ಕುಡಿತಿನಿ ರಾಮಾಂಜನಿ, ಪಿ.ಜಗನ್ನಾಥ, ಬಿಆರೆಲ್ ಸೀನಾ, ಹೊನ್ನಪ್ಪ, ಕೆರಕೋಡಪ್ಪ, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಶ್ರೀನಿವಾಸ್ ಹಾಗೂ ಸರಗು ನಾಗರಾಜು, ಸಂಗನಕಲ್ಲು ವಿಜಯಕುಮಾರ್, ಬೆಣಕಲ್ ಬಸವರಾಜಗೌಡ,  ಕನಕ, ಇಮಾಮ್ ಗೋಡೆಕಾರ. ಕೆಎಂಎಫ್ ಧನಂಜಯ ಹಮಾಲ್  ಕುಡುತಿನಿ ರಾಮಾಂಜನಿ, ರಫೀಕ್, ಎಲ್ ಮಾರಣ್ಣ, ಎರಕುಲ ಸ್ವಾಮಿ  ಸೇರಿದಂತೆ ಹಲವರು  ಭಾಗವಹಿಸಿದ್ದರು
One attachment • Scanned by Gmail