ವಿಮ್ಸ್ ಗುತ್ತಿಗೆ ಕಾರ್ಮಿಕರ ಸಮ್ಮೇಳನ
ಸಂಜೆವಾಣಿ ವಾರ್ತೆ
ಬಳ್ಳಾರಿ ಆ.18- – ನಗರದ   ವಿಮ್ಸ್‌ನ ಬಿ.ಸಿ ರಾಯ್ ಸಭಾಂಗಣದಲ್ಲಿ ವಿಮ್ಸ್ ಗುತ್ತಿಗೆ ಕಾರ್ಮಿಕರ ಸಮ್ಮೇಳನ ಜರುಗಿತು. ಈ ಸಮ್ಮೇಳನಕ್ಕೆ ಅತಿಥಿಗಳಾಗಿ ಆಗಮಿಸಿದ ವಿಮ್ಸ್ ನಿರ್ದೇಶಕರಾದ ಡಾ.ಟಿ.ಗಂಗಾಧರ ಗೌಡ  ಶುಭ ಹಾರೈಸಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿಗಳಾದ .ಕೆ.ಸೋಮಶೇಖರ್ ಅವರು ಆಗಮಿಸಿದ್ದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಸಂಘದ ಕಾರ್ಯದರ್ಶಿ  ಎ.ದೇವದಾಸ್ ಅವರು ವಹಿಸಿದ್ದರು. ಸಭೆಗೂ ಮುನ್ನ ಕೋಲ್ಕತ್ತಾದ ಸ್ನಾತ್ತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ, ಅಪರಾಧಿಗಳನ್ನು ಬಂಧಿಸಿ ನಿದರ್ಶನೀಯ ಶಿಕ್ಷೆ ನೀಡುವಂತೆ ಒತ್ತಾಯಿಸಿ ಗೊತ್ತುವಳಿಯನ್ನು ಮಂಡಿಸಲಾಯಿತು ಹಾಗೂ ಮಡಿದ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಸಭೆಯಲ್ಲಿ ಮಾತನಾಡಿದ ಗಣ್ಯರು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು
ಬೇಡಿಕೆಗಳು
. ಎಲ್ಲಾ ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಸರ್ಕಾರಿ ನೌಕರರೆಂದು ಪರಿಗಣಿಸಬೇಕು… ಅವಶ್ಯಕತೆಗೆ ಅನುಗುಣವಾಗಿ ಸ್ಕ್ಯಾವೆಂಜರ್ಸ್ ಅಟೆಂಡರ್ಸ್ ಸಂಖ್ಯೆಯನ್ನು ಹೆಚ್ಚಿಸಬೇಕು.
ಗುತ್ತಿಗೆದಾರರು ಬದಲಾದಾಗಲೆಲ್ಲ, ಸಂಘದ ಮುಖಂಡರೊಂದಿಗೆ ಸಭೆ ನಡೆಸಿ, ಶಾಸನಬದ್ಧ ಎಲ್ಲಾ ಸೌಲಭ್ಯಗಳನ್ನು ನೀಡಲು ಕ್ರಮಕೈಗೊಳ್ಳಬೇಕು. ಹೊರಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ರೂ.28,000 ನಿಗದಿಗೊಳಿಸಬೇಕು.
ಈಗಿರುವ ಗುತ್ತಿಗೆದಾರರು ವೇತನ, ನೇಮಕಾತಿ ಆದೇಶ, ಪೇಮೆಂಟ್ ಸ್ಲಿಪ್, ಪಿ.ಎಫ್, ಇಎಸ್‌ಐ ಇನ್ನಿತರ ಸೌಲಭ್ಯ ನಿಗದಿತವಾಗಿ ನೀಡಬೇಕು.ಗುತ್ತಿಗೆ ಕಾರ್ಮಿಕರಿಗೆ ಬಾಕಿಯಿರುವ ಅರಿಯರ್ಸ್ ನೀಡಬೇಕು.
.ಉದ್ಯಾನವನಗಳನ್ನು ನಿರ್ವಹಣೆ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಅಕೌಂಟ್ ಮೂಲಕ ವೇತನ ಸಂದಾಯ ಮಾಡಬೇಕು. ಅವರಿಗೆ ಕನಿಷ್ಠ ವೇತನ, ಪಿ.ಎಫ್, ಇಎಸ್‌ಐ, ನೇಮಕಾತಿ ಆದೇಶ, ಪೇಮೆಂಟ್ ಸ್ಲಿಪ್, ಗುರುತಿನ ಚೀಟಿ ಮುಂತಾದ ಶಾಸನಬದ್ಧ ಸೌಲಭ್ಯಗಳನ್ನು ನೀಡಬೇಕು.  ಎಂದು ಒತ್ತಾಯಿಸಿದರು
ಪ್ರಾಸ್ತಾವಿಕವಾಗಿ ಸಂಘದ ಅಧ್ಯಕ್ಷರಾದ .ಸೋಮಶೇಖರ ಗೌಡ  ಮಾತನಾಡಿದರು. ವೇದಿಕೆಯ ಮೇಲೆ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್.ಎನ್, ಸಂಘದ ಉಪಾಧ್ಯಕ್ಷರಾದ ಎ.ಶಾಂತಾ, ಜಂಟಿ ಕಾರ್ಯದರ್ಶಿ ಸುರೇಶ್.ಜಿ ಉಪಸ್ಥಿತರಿದ್ದರು.
ಸಮ್ಮೇಳನದ ಕೊನೆಯಲ್ಲಿ ನೂತನ ಸಮಿತಿ ಚುನಾಯಿಸಲಾಯಿತು. ಅಧ್ಯಕ್ಷರಾಗಿ ಎ.ದೇವದಾಸ್, ಕಾರ್ಯದರ್ಶಿಯಾಗಿ ಡಾ.ಪ್ರಮೋದ್.ಎನ್, ಉಪಾಧ್ಯಕ್ಷರಾಗಿ ಎ.ಶಾಂತಾ, ಎನ್ ಲಕ್ಷ್ಮಿ, ಟಿ.ಪಾರ್ವತಮ್ಮ, ಹೊನ್ನೂರ್ ಬೀ, ಆರೋಗ್ಯ ಮೇರಿ, ನೀಲಮ್ಮ, ಚಿಟ್ಟೆಮ್ಮ ಹಾಗೂ ಹುಲುಗಪ್ಪ, ಖಜಾಂಚಿಯಾಗಿ ಜಿ.ಸುರೇಶ್ ಹಾಗೂ 26 ಸದಸ್ಯರುಳ್ಳ ಕಾರ್ಯಕಾರಿ ಸಮಿತಿ ಚುನಾಯಿಸಲಾಯಿತು.
One attachment • Scanned by Gmail