ಶ್ರೀ ಕೀರ್ತಿ ಜಾನಪದ ಮತ್ತು ಸುಗಮ ಸಂಗೀತ ಕಲಾ ಟ್ರಸ್ಟ್ ಅಸ್ತಿತ್ವಕ್ಕೆ
ಸಂಜೆವಾಣಿ ವಾರ್ತೆ
ಹೊಸಪೇಟೆ, ಅ,18- ಹೊಸಪೇಟೆಯ ಪ್ರತಿಷ್ಠಿತ ಮಲ್ಲಿಗೆ ಹೋಟೆಲ್ ಸಭಾಂಗಣದಲ್ಲಿ ಶ್ರೀಕೀರ್ತಿ ಜಾನಪದ ಮತ್ತು ಸುಗಮ ಸಂಗೀತ ಕಲಾ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದ್ದು, ಖ್ಯಾತ ಜಾನಪದ ಕಲಾವಿದರಾದ ನಾಡಿನ ಹೆಸರಾಂತ ಗುರುರಾಜ ಹೊಸಕೋಟೆಯವರು ಉದ್ಘಾಟಿಸಿ ಮಾತನಾಡಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಜೀವಂತಿಕೆಯಾಗಿ ಇಡುವ ಬಗ್ಗೆ ಹಾಗೂ ಜಾನಪದ ಇತಿಹಾಸ  ಸಾವಿರಾರು ವರ್ಷಗಳ ಹಳೇಯದಾಗಿದ್ದು, ಅದನ್ನು ಉಳಿಸಿ ಬೆಳೆಸುವ ಹಾಗೂ ನಮ್ಮ ಸೊಗಡನ್ನು ಎತ್ತಿಹಿಡಿಯುವ ಅನಿವಾರ್ಯತೆ ಇದೆ ಎಂದು ಹಾಗೂ ಪ್ರತಿಯೊಬ್ಬರು ಪಾಶ್ಚಾತ್ಯ ಸಂಗೀತಗಳಿಗೆ ಮಾರು ಹೋಗುತ್ತಿರುವ ಈ ಸಂದರ್ಭದಲ್ಲಿ ಈ ಮೇಲಿನ ಟ್ರಸ್ಟ್‍ನವರು ಒಂದು ವಿನೂತನವಾದ ಕಾರ್ಯಕ್ರಮವನ್ನು ಮಾಡಿ ನನ್ನನ್ನು ಉದ್ಘಾಟನೆಗೆ ಕರೆದಿರುವುದು ನನ್ನ ಸೌಭಾಗ್ಯವೆಂದು ತಮ್ಮ ಅನಿಸಿಕೆಯನ್ನು ತಿಳಿಸಿ ಮತ್ತು ಆರ್ಶಿವದಿಸಿ ನಿಮ್ಮೊಂದಿಗೆ ಸದಾ ನನ್ನ ಸಹಕಾರ ಇರುತ್ತದೆ, ಜಾನಪದ ಕಲೆಯನ್ನು ನಾವೆಲ್ಲರೂ ಒಟ್ಟುಗೂಡಿ ಉಳಿಸಿ, ಬೆಳೆಸೋಣ ಎಂದರು.
ವಿಶೇಷ ಆಹ್ವಾನಿತರಾಗಿ ಬಿ.ಎಂ.ಎಂ. ಇಸ್ಪಾತ್ ಕಂಪನಿಯ ವ್ಯವಸ್ಥಾಪಕರಾದ ಗಣೇಶ ಹೆಗಡೆಯವರು ಈ ಈ ಟ್ರಸ್ಟ್‍ಗೆ ಮಹಾ ಪೋಷಕರಾಗಿ ಮತ್ತು ನಾವು ಮಾಡುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಅಗತ್ಯವಿರುವ ಸೌಕರ್ಯವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.
ಈ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತರಾದ ಮಾತಾಮಂಜಮ್ಮ ಜೋಗತಿ, ಹುಡಾ ಅಧ್ಯಕ್ಷರಾದ ಇಮಾಮ್ ನಿಯಾಜಿ, ಮಲ್ಲಿಗೆ ಹೋಟೆಲ್ ಮಾಲೀಕರಾದ ಪಿ.ಡಿ.ಗೌತಮ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ್ ರಂಗಣ್ಣನವರ್, ಗುಜ್ಜಲ್ ಗಣೇಶ್, ಕಸಾಟು ಉಮಾಪತಿ, ತಾರಿಹಳ್ಳಿ ಜಂಬುನಾಥ, ಬೋಡಾರಾಮಪ್ಪ, ಎಸ್.ಎಸ್.ಚಂದ್ರಶೇಖರ್, ಮದುರಚೆನ್ನಶಾಸ್ತ್ರಿ, ಪರಮೇಶ್ವರಗೌಡ, ಹೊನ್ನೂರ್‍ವಲಿ ಸಾಹೇಬ್, ಹಾಗೂ ಅಪಾರ ಜಾನಪದ ಕಲಾಸಕ್ತರು, ಕಲಾಭಿಮಾನಿಗಳು ಬೇರೆ ಬೇರೆ ಊರುಗಳಿಂದ ಈ ಟ್ರಸ್ಟ್‍ನ್ನು ಅಭಿನಂದಿಸಲು ಗಣ್ಯರು ಹಾಗೂ ಕಲಾವಿದರು ಆಗಮಿಸಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಸರ್ವರ ಸಮಕ್ಷಮದಲ್ಲೂ ಶ್ರೀಕೀರ್ತಿ ಜಾನಪದ ಮತ್ತು ಸುಗಮ ಸಂಗೀತ ಕಲಾ ಟ್ರಸ್ಟ್‍ಗೆ ಶುಭವನ್ನು ಕೋರಿದರು.
ಪ್ರಾಸ್ತಾವಿಕವಾಗಿ ಪಿ.ವೆಂಕಟೇಶ ವಕೀಲರು ಮಾತನಾಡಿ ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ಮತ್ತು ಇದರ ಮಹತ್ವವನ್ನು ರಾಜ್ಯದೆಲ್ಲಡೆ ಸಾರಿ ಪ್ರತಿ 3ತಿಂಗಳಿಗೊಮ್ಮೆ ಜಾನಪದಕ್ಕೆ ಸಂಬಂಧಪಟ್ಟ ಸ್ಪರ್ಧೆಯನ್ನು ನಿಯೋಜಿಸಿ ಆ ಮೂಲಕ ಪುಸ್ತಕ ರೂಪದಲ್ಲಿ ಇದನ್ನು ಜೀವಂತವಾಗಿ ಇರಿಸುವ ಮಹದಾಸೆಯನ್ನು ವ್ಯಕ್ತಪಡಿಸಿದರು.  ನಿರೂಪಣೆಯನ್ನು ಹೆಚ್.ಪಿ.ಕಲ್ಲಂಭಟ್ ನೆರವೇರಿಸಿದರು, ಶ್ರೀಮತಿ ಕಮಲಾ ಕುಲಕರ್ಣಿ ವಂದನಾರ್ಪಣೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು.