ಅಭಿವೃದ್ಧಿಯೇ ವೈನಾಡು ವಿಕೋಪಕ್ಕೆ ಕಾರಣ
ಸಂಜೆವಾಣಿ ನ್ಯೂಸ್
ಮೈಸೂರು: ಆ.18: ವೈನಾಡು ವಿಕೋಪಕ್ಕೆ ಮಾರಕ ಆಗಿದೆ ಎಂದು ಎಟಿಐ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಮುಖ್ಯಸ್ಥ ಡಾ.ಅಶೋಕ್ ಎಸ್.ಸಂಗನಾಳ ಅಭಿಪ್ರಾಯ ಪಟ್ಟರು.
ಜಿಲ್ಲಾ ಪತ್ರಕರ್ತರ ಸಂಘವು ಈಚೆಗೆ ವೈನಾಡಿನ ಕರ್ತವ್ಯ ನಿರ್ವಹಿಸಿದ ಪತ್ರಕರ್ತರ ಅನುಭವ ಹಂಚಿಕೆ ಹಾಗೂ ತಜ್ಞರೊಂದಿಗೆ ವಿಪತ್ತು ನಿರ್ವಹಣೆ ಕುರಿತು ಸಂವಾದದಲ್ಲಿ ಅವರು ಮಾತನಾಡಿದರು. ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾಯ್ದೆ ವಿರುದ್ಧ ಅಭಿವೃದ್ಧಿ ಕಾರ್ಯಗಳು ನಡೆದ ಭಾಗದಲ್ಲಿ ಇಂತಹ ಅವಘಡಗಳು ಸಂಭವಿಸುತ್ತವೆ. ವೈನಾಡಿನ ಬೌಗೋಳಿಕ, ಪ್ರಾದೇಶಿಕ ಪ್ರಕೃತಿಕ ಸೌಂದರ್ಯಕ್ಕೆ ವಿರುದ್ಧ ಅಭಿವೃದ್ಧಿ ಕಾರ್ಯದಿಂದ ಇಂತಹ ಅವಘಡ ಆಗಿವೆ.ಈ ಬಗ್ಗೆ ಹೆಚ್ಚು ಜನತೆ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ. ಶಿವಕುಮಾರ್, ರಂಗಸ್ವಾಮಿ ಮಾದಾಪುರ ಮೊದಲಾದವರು ವೈನಾಡು ದುರಂತವನ್ನು ತಾವು ಕಣ್ಣಾರೆ ಕಂಡು, ಅಲ್ಲಿನ ಪರಿಸ್ಥಿತಿ, ಪತ್ರಕರ್ತರು ಮಾತ್ರವಲ್ಲ, ಅಲ್ಲಿನ ಆಡಳಿತಗಳು ಎದುರಿಸಿದ ಪರಿಹಾರ ಕಾರ್ಯ ಸವಾಲು, ಇತರ ಭಾಗದವರು ಈ ದುರಂತಕ್ಕೆ ಸ್ಪಂದಿಸಿದ ರೀತಿ ವಿವರಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಪಂ ಸಿಇಒ ಕೆ.ಎಂ ಗಾಯತ್ರಿ ಮಾತನಾಡಿ, ಕಂದಾಯ ಇಲಾಖೆ ವತಿಯಿಂದ ಜಿಲ್ಲಾಡಳಿತಗಳು ಸಂಭವನೀಯ ಪ್ರಕೃತಿ ವಿಕೋಪಗಳ ಬಗ್ಗೆ ಸ್ಪಂದಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡಿರುತ್ತವೆ. ಅತಿ ವೃಷ್ಟಿಯಿಂದಾಗಿ ಯಾವ ಯಾವ ಭಾಗಗಳಲ್ಲಿ ಹಾನಿಯಾಗಬಹುದಾಗಿದೆ ಎಂಬ ಮಾಹಿತಿಯನ್ನು ಗ್ರಾಪಂ ಮಟ್ಟದಲ್ಲಿಯೇ ಮುಂದಾಗಿಯೇ ಪಡೆಯಲಾಗಿರುತ್ತದೆ. ಈ ರೀತಿ ನಷ್ಟ ತಪ್ಪಿಸಲು ಜಿಲ್ಲಾಡಳಿತಗಳು ರಾಜ್ಯದಲ್ಲಿ ಸಜ್ಜಾಗಿರುತ್ತವೆಂದರು.
ಮತ್ತೋರ್ವ ಹಿರಿಯ ಪತ್ರಕರ್ತರಾದ ಕೆ. ನರಸಿಂಹಮೂರ್ತಿ, ಸಂಘದ ಅಧ್ಯಕ್ಷ ಕೆ. ದೀಪಕ್, ಅನ್ವೇಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಮರನಾಥ ರಾಜೇ ಅರಸ್ ಇನ್ನಿತರರು ಇದ್ದರು.