ವೈದ್ಯರ ಮೇಲಿನ ಹೇಯಕೃತ್ಯಗಳನ್ನು ಸಹಿಸುವುದಿಲ್ಲ: ಡಾ.ಶಶಿಧರ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.18: ಹಗಲುರಾತ್ರಿ ಎನ್ನದೇ ಜೀವದ ಹಂಗು ತೊರೆದು ರೋಗಿಗಳ ಸೇವೆಯಲ್ಲಿ ತೊಡಗುವ ವೈದ್ಯರ ಮೇಲಿನ ಹೇಯಕೃತ್ಯಗಳನ್ನು ಆರೋಗ್ಯ ಸಿಬ್ಬಂದಿಗಳು ಎಂದಿಗೂ ಸಹಿಸುವುದಿಲ್ಲ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯ ವೈದ್ಯೆಯ ಮೇಲೆ ದುಷ್ಕರ್ಮಿಗಳ ಅತ್ಯಾಚಾರ ಹಾಗೂ ಅಮಾನುಷ ಕೊಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು.
ವೈದ್ಯರನ್ನು ಹಿಂದಿನಿಂದಲೂ ದೇವರು ಎಂದು ಭಾವಿಸುವ ಪರಿಪಾಠ ಭಾರತೀಯರಲ್ಲಿ ಬೆಳೆದು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ವೈದ್ಯರ ಮೇಲೆ ಸಾಕಷ್ಟು ಅಮಾನುಷ ಘಟನೆಗಳು ನಡೆಯುತ್ತಿವೆ. ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆಯ ಮೇಲೆ ದುಷ್ಕರ್ಮಿಗಳ ಅತ್ಯಾಚಾರ ಹಾಗೂ ಅಮಾನುಷ ಕೊಲೆ ಮಾಡಿರುವ ಕ್ರಮ ಸರಿಯಾದುದಲ್ಲ. ಇದಕ್ಕಾಗಿ ನಾವುಗಳು ಕೇವಲ ಓ.ಪಿ.ಡಿ ಸೇವೆಯನ್ನು ಮಾತ್ರ ನೀಡಿ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ವೈದ್ಯರುಗಳು ಕೊರೋನಾ, ಡೆಂಗ್ಯೂ, ಮಲೇರಿಯಾ ಸೇರಿದಂತೆ ವಿವಿಧ ಮಾರಣಾಂತಿಕ ಕಾಯಿಲೆಗಳ ವಿರುದ್ದ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತೇವೆ. ಕೊರತೆಯಿರುವ ಸಿಬ್ಬಂದಿಯ ನಡುವೆಯೂ ವೈದ್ಯರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ರೋಗಿಗಳ ಸೇವೆಯಲ್ಲಿ ಅರ್ಪಣಾ ಮನೋಭಾವದಿಂದ ಕೆಲಸ ನಿರ್ವಹಿಸುತ್ತಿದ್ದರೂ ಇಂದಿನ ಯುವಜನತೆ ಸಂಯಮ ಕಳೆದುಕೊಳ್ಳುವ, ಮದ್ಯಪಾನ ಮಾಡುವ ಹಾಗೂ ಉದ್ದೇಶಪೂರ್ವಕವಾಗಿ ವೈದ್ಯರನ್ನು ಗುರಿಯಾಗಿಸಿಕೊಂಡು ಮಾಡುವ ಅಮಾನವೀಯ ಘಟನೆಗಳು ಸಂಭವಿಸಲು ಕಾರಣವಾಗುತ್ತಾರೆ. ಇಂಥಹ ಘಟನೆಗಳು ಹಲವು ಬಾರಿ ನಡೆಯುತ್ತಿದ್ದರೂ ಸರ್ಕಾರಗಳು ವೈದ್ಯರ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಬೇಕು.
ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಉಜ್ವಲ ಭವಿಷ್ಯವನ್ನು ಹೊಂದಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದರು. ಅವರು ರಾತ್ರಿಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ದುಷ್ಕರ್ಮಿಗಳು ಅವರ ಮೇಲೆ ಅತ್ಯಾಚಾರ ನಡೆಸಿ ಅಮಾನವೀಯವಾಗಿ ಕೊಲೆ ಮಾಡಿರುವ ಕ್ರಮ ಅತ್ಯಂತ ಖಂಡನೀಯ. ನಿಧನಹೊಂದಿದ ವೈದ್ಯೆಯ ಆತ್ಮಕ್ಕೆ ಚಿರಶಾಂತಿ ದೊರಕಲಿ, ಸ್ವಾಸ್ತ ಸಮಾಜದಲ್ಲಿ ಇಂಥಹ ಘಟನೆಗಳು ಮರುಕಳಿಸದಿರಲಿ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಡಾ.ಶ್ರೀಕಾಂತ್, ಡಾ.ಜ್ಞಾನೇಶ್, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.