ಪ್ರಾಸಿಕ್ಯೂಷನ್‍ಗೆ ಅನುಮತಿ ಸಿಡಿದ್ದೆದ್ದ ಕೈ ಮುಖಂಡರು ಹಾಗೂ ಬೆಂಬಲಿಗರು. ಟೈರ್ ಗೆ ಬೆಂಕಿ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಆ.18:– ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ವಿರುದ್ದ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಅವರ ವಿರುದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ಮಾಡಿ, ಮೆರವಣಿಗೆ ಮಾಡಿ, ರಸ್ತೆ ತಡೆ ನಡೆಸಿ ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ಧಾರ್ ಜಿ.ಸುರೇಂದ್ರಮೂರ್ತಿ ಯವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಟಿ.ಜೆ. ಅಬ್ರಾಹಂ ಎಂಬುವರು ನೀಡಿದ ಮುಡಾ ಹಗರಣದ ವಿರುದ್ದ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು ಶನಿವಾರ ಬೆಳಿಗ್ಗೆ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಮದ್ಯಾಹ್ನದ ವೇಳೆಗೆ ಪಟ್ಟಣದ ಡಾ.ಬಾಬು ಜಗಜೀವನರಾಂ ವೃತ್ತದ ಬಳಿ ಜಮಾವಣೆಗೊಂಡ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಮುಖಂಡರು ರಾಜ್ಯಪಾಲರ ವಿರುದ್ದ ದಿಕ್ಕಾರ ಮೊಳಗಿಸಿ ಕೆಂಡಕಾರಿದರು.
ಅಲ್ಲಿಂದ ಪಟ್ಟಣದ ಮೈಸೂರು ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ತೆರಳಿದ ಪ್ರತಿಭಟನಾಕಾರರು ಸಂವಿಧಾನ ಶಿಲ್ಪಿಗೆ ಪುಷ್ಪಮಾಲೆ ಹಾಕುವ ಮೂಲಕ ಸ್ಥಳದಲ್ಲಿಯೇ ಕುರಿತು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅಮಿತ್ ಷಾ, ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ವಿರುದ್ದ ದಿಕ್ಕಾರ ಕೂಗಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವಿರುದ್ದ ದಿಕ್ಕಾರ ಕೂಗಿ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪರವಾಗಿ ಜೈಕಾರ ಮೋಗಿಸುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಬಳಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ವಾಣಿವಿಲಾಸ ರಸ್ತೆಯ ಮೂಲಕ ತೆರಳಿ ಡಾ.ಬಾಬು ಜಗಜೀವನರಾಂ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ, ಟೈರ್ ಮತ್ತು ರಾಜ್ಯಪಾಲರ ಭಾವಚಿತ್ರಕ್ಕೆ ಬೆಂಕಿ ಇಟ್ಟು ತಮ್ಮ ತಮ್ಮ ಆಕ್ರೋಶ ವ್ಯಕ್ತಪಡಿಸಿ ನಂತರ ತಾಲೂಕು ಕಚೇರಿ ಬಳಿ ತೆರಳಿ ರಸ್ತೆ ತಡೆ ನಡೆಸಿದರಲ್ಲದೇ ಕೆಲ ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ಮಾತನಾಡಿ ರಾಜ್ಯ ಕಾಂಗ್ರೆಸ್ ಪರಿಶಿಷ್ಟ ಘಟಕದ ಉಪಾಧ್ಯಕ್ಷ ಕಲ್ಲಳ್ಳಿ ಮಾತನಾಡಿ ನಮ್ಮ ನಾಯಕರಾದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕವಿಲ್ಲದ ವ್ಯಕ್ತಿಯಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಕೇಂದ್ರ ಸರ್ಕಾರ ತನ್ನ ಅಧಿಕಾರ ದುರಪಯೋಗ ಮಾಡಿಕೊಂಡು ರಾಜ್ಯಪಾಲರ ಮೂಲಕ ಸಿದ್ದರಾಮಯ್ಯನವರ ಮೇಲೆ ರಾಜಕೀಯ ಷಡ್ಯಂತ್ರ ನಡೆಸುತ್ತಿದೆ ಎಂದು ದೂರಿದರು.
ದಲಿತ ಮುಖಂಡ ವೇಣುಗೋಪಾಲ್ ಮಾತನಾಡಿ ಸಿದ್ದರಾಮಯ್ಯನವರು ಒಬ್ಬ ಹಿಂದುಳಿದ ವರ್ಗದವರ ನಾಯಕರಾಗಿದ್ದು ಬಡವರು, ಶೋಷಿತರ, ಅಲ್ಪಸಂಖ್ಯಾತರ, ಮಹಿಳೆಯರು, ರೈತ ಪರವಾಗಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆತಂದು ಬಡವರು ಹಿಂದುಳಿದವರ ಪರವಾಗಿ ಧ್ವನಿಯಾಗಿದ್ದಾರೆ. ಇಂತವರ ಮೇಲೆ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಅವರ ಜನಪ್ರಿಯತೆಯನ್ನು ಸಹಿಸದೇ ರಾಜಕೀಯ ಪ್ರೇರಿತವಾಗಿ ಸಿದ್ದರಾಮಯ್ಯನವರನ್ನು ತುಳಿಯುವ ಕುತಂತ್ರ ನಡೆಸುತ್ತಿದ್ದಾರೆ ಎಂದರು.
ರಾಜ್ಯದ ಜನ ಮತ್ತು ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯನವರ ಪರವಾಗಿದ್ದು ರಾಜ್ಯಪಾಲರ ನಡೆಯನ್ನು ಖಂಡಿಸಿ ರಾಜ್ಯಧ್ಯಾಂತ ಹೋರಾಟ ಮಾಡುತ್ತೇವೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಪ್ರಜಾಪ್ರಭುತ್ವ ವ್ಯಸ್ಥೆಯಲ್ಲಿ ಮಾರಕವಾಗಿದೆ ಎಂದು ಖಂಡಿಸಿದರು.
ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ಧಾರ್ ಜಿ.ಸುರೇಂದ್ರಮೂರ್ತಿ ಯವರ ಮೂಲಕ ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಲಾಂಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಎಸ್‍ಸಿ ಘಟಕದ ಅಧ್ಯಕ್ಷ ದೊಡ್ಡವಡ್ಡರಗುಡಿ ನಂದೀಶ್, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ಜಾವೀದ್‍ಪಾಷಾ, ನಟರಾಜ್, ಮಿಕ್ಸರ್‍ಶಂಕರ್, ಶಿವುನಾಯಕ್, ಶಂಕರ್‍ಸ್ವಾಮಿ, ಜಿಪಂ ಮಾಜಿ ಸದಸ್ಯ ಮಾರ್ಚಹಳ್ಳಿಶಿವರಾಮ್, ನಗರಯೋಜನಾ ಪ್ರಾಧಿಕಾರದ ನಿರ್ದೇಶಕರಾದ ಪ್ರಸನ್ನಕುಮಾರ್, ಸರಿತಾಜವರಪ್ಪ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಮುಖಂಡರಾದ ಗೀತಾಮಹೇಶ್, ವಿನಯ್, ಪುಟ್ಟರಾಜು, ಕಾಳುಕುಮಾರ್, ಆದರ್ಶ, ಸುಧಾಕರ, ಚರನಹಳ್ಳಿಶಂಕರ್ ಸೇರಿದಂತೆ ಇನ್ನಿತರರು ಇದ್ದರು.