ಸಿಎಂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ:ಈಶ್ವರಸಿಂಗ್ ಠಾಕೂರ್
ಬೀದರ್.ಆ.೧೮: ಮುಡಾ ನಿವೇಶನ ಹಗರಣದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ಧರಾಮಯ್ಯ ಹಠ ಬಿಟ್ಟು ಕೂಡಲೇ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಬೇಕೆಂದು ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿಗಳು ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ರಾಜ್ಯಪಾಲರು ತಮ್ಮ ಸಂವಿಧಾನದತ್ತ ಅಧಿಕಾರ ಚಲಾಯಿಸಿ ಕಾನೂನು ಕ್ರಮ ಕೈಗೊಳ್ಳಲು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಮುಡಾ ಹಗರಣದ ಕುರಿತು ಸಾಕಷ್ಟು ಪುರಾವೆ, ದಾಖಲೆಗಳನ್ನು ಇಟ್ಟುಕೊಂಡು ಅನುಮತಿ ನೀಡಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲು ಅನುವಾಗುವಂತೆ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದ ಘನತೆ ಉಳಿಸಲಿ ಎಂದಿದ್ದಾರೆ.
ಸುಳ್ಳು ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರಿಗೆ ದಿಶಾಭೋಲ್ ಮಾಡಿದೆ. ಹಲವು ಭ್ರಷ್ಟಾಚಾರದ ಆರೋಪ ಕೇಳಿಬಂದಿವೆ. ಮುಡಾ ಹಗರಣ, ವಾಲ್ಮಿಕಿ ಹಗರಣ, ಲಂಚದ ಆರೋಪ, ಅಧಿಕಾರಿಗಳ ಆತ್ಮಹತ್ಯೆ, ರೈತರ ಆತ್ಮಹತ್ಯೆ ಸೇರಿದಂತೆ ಹಲವು ಆರೋಪಗಳಿವೆ. ಶೀಘ್ರದಲ್ಲೇ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಠಾಕೂರ ಭವಿಷ್ಯ ನುಡಿದರು.