ಅಂಗನವಾಡಿಗಳಿಗೆ ಕಳಪೆ ಮಟ್ಟದ ಮೊಟ್ಟೆಗಳ ಪೂರೈಕೆ: ಕ್ರಮಕ್ಕೆ ದಲಿತ ಸೇನೆ ಆಗ್ರಹ
ಚಿಂಚೋಳಿ,ಆ.೧೮- ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಕಳಪೆ ಮಟ್ಟದಿಂದ ಕೂಡಿವೆ. ಸರ್ಕಾರ ಮಕ್ಕಳ ಹಾಗೂ ಗರ್ಭಿಣಿ ಸ್ತ್ರೀಯರ ಅಪೌಷ್ಠಿಕತೆ ದೂರ ಮಾಡಿ ಪೌಷ್ಠಿಕತೆ ಹೆಚ್ಚಿಸಿ ಅವರ ಆರೋಗ್ಯವನ್ನು ಕಾಪಾಡಲು ಮೊಟ್ಟೆಗಳನ್ನು ನೀಡುತ್ತಿದೆ. ಆದರೇ, ಹೀಗೆ ನೀಡುವ ಮೊಟ್ಟೆಗಳು ಅಪೌಷ್ಠಿಕತೆಯಿಂದ ಕೂಡಿದ್ದು ಕಳಪೆ ಮಟ್ಟದ್ದಾಗಿದೆ ಎಂದು ತಾಲೂಕು ದಲಿತ ಸೇನೆ ದೂರನ್ನು ನೀಡಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಬೀಗ ಹಾಕಲಾಗಿರುತ್ತದೆ. ಕೆಲವು ಕಡೆ ಕೇಂದ್ರಗಳು ಬರೀ ಹೆಸರಿಗಷ್ಟೇ ಬಾಗಿಲು ತೆಗೆಯುತ್ತಿದ್ದು, ಅಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಬೇಕಾದಂತಹ ಕಾರ್ಯಕರ್ತೆಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೇ ಗೈರು ಹಾಜರಾಗುತ್ತಿದ್ದಾರೆ.
ಅಲ್ಲದೇ, ಮಕ್ಕಳಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ನೀಡಬೇಕಾದಂತಹ ಮೊಟ್ಟೆಗಳನ್ನು ಕಡಿಮೆ ಪ್ರಮಾಣದಲ್ಲಿ ನೀಡುತ್ತಿದ್ದಾರೆ.ಅಂತಹ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರ ಮೇಲೆ ಹಾಗೂ ಮೊಟ್ಟೆ ವಿತರಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಮಕ್ಕಳ ಹಾಗೂ ಸ್ತ್ರೀಯರ ಸ್ವಾಸ್ಥ್ಯ ಕಾಪಾಡಬೇಕೆಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನೀಡಿರುವ ದೂರು ಪತ್ರದಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ದಲಿತ ಸೇನೆಯ ತಾಲೂಕಾಧ್ಯಕ್ಷ ರಾಘವೇಂದ್ರ ಹೂವಿನಭಾವಿ,ದಲಿತ ಸೇನೆ ಯುವ ಘಟಕದ ಅಧ್ಯಕ್ಷ ಚೇತನ್ ನಿರಾಳ್ಕರ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಶ್ರೀಕಾಂತ ರೂಸ್ತಾಂಪುರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.