ವೈದ್ಯೆ ಮೇಲೆ ಕ್ರೂರ ಕೃತ್ಯ ಖಂಡಿಸಿ ನಾಗರಿಕರಿಂದ ಕ್ಯಾಂಡಲ್ ಮಾರ್ಚ್
ಆಳಂದ್.ಆ.೧೮: ಕೋಲ್ಕತ್ತಾ ವೈದ್ಯೆಯ ಮೇಲೆ ನಡೆದ ಕ್ರೂರ ಕೃತ್ಯವನ್ನು ಖಂಡಿಸಿ ಪಟ್ಟಣದ ಬಸ್ ನಿಲ್ದಾಣ ಮುಂದೆ ಎಪಿಜೆ ಅಬ್ದುಲ್ ಕಲಾಂ ಸಾಮಾಜಿಕ ಕಲ್ಯಾಣ ಸಮಿತಿಯ ನೇತೃತ್ವದಲ್ಲಿ ನಾಗರಿಕ ಮುಖಂಡರು ಮೃತರಿಗೆ ಶೃದ್ಧಾಂಜಲಿ ಅರ್ಪಿಸಿ ಕ್ಯಾಂಡಲ್ ಮಾರ್ಚ್ ಕೈಗೊಂಡರು.
ಪಟ್ಟಣದ ಬಸ್ ನಿಲ್ದಾಣ ಬಳಿ ಆಯೋಜಿಸಲಾದ ಈ ಶೃದ್ಧಾಂಜಲಿಯಲ್ಲಿ ಸಮಿತಿಯ ಕಾನೂನು ಸಲಹೆಗಾರ ದಿಲಿಪ ಕ್ಷೀರಸಾಗರ್ ಅವರು ಮಾತನಾಡಿ, ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು “
ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಕೇಂದ್ರ ಸರ್ಕಾರದ ಘೋಷಣೆೆ್ದ ದೇಶದಲ್ಲಿ ಸಂಪೂರ್ಣ ವಿಫಲವಾಗಿದೆ. ಹತರಸ್ ಮತ್ತು ಮಣಿಪೂರದಲ್ಲೂ ಮಹಿಳೆಯರ ಮೇಲೆ ಅತ್ಯಾಚರಕ್ಕೆ ಕ್ರಮ ಜರುಗಿಸಿಲ್ಲ. ಕೋಲ್ಕತ್ತಾ ಮಹಿಳಾ ವೈದ್ಯರ ಮೇಲೆ ನಡೆದ ಬಲಾತ್ಕಾರ, ಕೊಲೆ, ಇತ್ಯಾದಿ ಘಟನೆಗಳು ನಾಗರಿಕ ಸಮಾಜವನ್ನು ತಲೆ ತಗ್ಗಿಸಿವೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ತಕ್ಷಣ ಕಠಿಣ ಕಾನೂನು ಜಾರಿಗೆ ತರಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಪಿಜೆ ಅಬ್ದುಲ್ ಕಲಾಂ ಸಮಿತಿಯ ಪ್ರಮುಖ ಮಸ್ತಾನ್ ಪಟೇಲ್, ನಿಜಾಂ ಜಮಾದಾರ್, ಆಕಾಶ್ ವಾಲ್ಮೀಕಿ, ಮುಖಂಡ ದಯಾನಂದ್ ಸೇರಿಕಾರ್, ಮಲ್ಲಿಕಾರ್ಜುನ್ ಬೋಳಣಿ, ಜಾಕೀರ್ ಭಾಯಿ, ಸಲಿಂ ಜಮಾದಾರ್, ಸದ್ದಾಂ ಪಟೇಲ್, ಫಯಾಜ್ ಪಟೇಲ್, ಇಸ್ಮಾಯಿಲ್, ಶೇಕ್, ಲಾಯಕಲಿ, ಅಬ್ದುಲ್ ಖಾದರ್, ಪ್ರೊ. ಮೊಹ್ಮದ್ ಶೇಕ್, ಸುರೇಶ್ ರಾಥೋಡ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮೃತ ವೈದ್ಯೆಯ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿ, ಮೌನ ಆಚರಿಸಿ ಶಾಂತಿ ಕೋರಿ ಕ್ಯಾಂಡಲ್ ಮಾರ್ಚ್ ನಡೆಯಿತು.