ರಾಜ್ಯಪಾಲರ ಕ್ರಮ ಸರಿ : ಜೋಶಿ
ಹುಬ್ಬಳ್ಳಿ, ಆ 17: ಸಿಎಂ ಸಿದ್ದರಾಮಯ್ಯ ಮೇಲೆ ಪ್ರಾಸಿಕ್ಯೂಷನ್ ಅನುಮತಿ ಕೊಡಲು ರಾಜ್ಯಪಾಲರು ಸಮಯಾವಕಾಶ, ತಜ್ಞರ ಸಲಹೆ ಪಡೆದು ಸಮಗ್ರ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ಈ ಕ್ರಮ ಸರಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಈ ಕ್ರಮ ಸಾರ್ವಜನಿಕ ಜೀವನದಲ್ಲಿರುವ ಯಾವುದೇ ವ್ಯಕ್ತಿ ಶುದ್ದತೆ ಕಾಪಾಡಿಕೊಳ್ಳುವುದಕ್ಕೆ ಬಹುದೊಡ್ಡ ಹೆಜ್ಜೆಯಾಗಿದೆ. ಯಾರೇ ಇದ್ದರೂ ಸಹ ಉನ್ನತ ಸ್ಥಾನದಲ್ಲಿದ್ದವರ ಮೇಲೆ ಆರೋಪ ಬಂದಾಗ ತನಿಖೆ ಹಾಗೂ ಕ್ರಮಗಳಾಗಬೇಕು. ಸಾರ್ವಜನಿಕ ಜೀವನದಲ್ಲಿದ್ದವರು ಭ್ರಷ್ಟಾಚಾರ ಅಥವಾ ತಪ್ಪು ಮಾಡಬೇಕಾದರೆ ಭಯ ಇರಬೇಕು. ರಾಜ್ಯಪಾಲರು ಅಳೆದು ತೂಗಿ ಪ್ರ್ರಾಸಿಕ್ಯೂಷನ್‍ಗೆ ಅನುಮತಿ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತಾರೆಂದು ಭಾವಿಸಿದ್ದೇನೆ. ಏಕೆಂದರೆ ಸಿದ್ದರಾಮಯ್ಯ ತಾವು ಸ್ವಚ್ಛ ಹಾಗೂ ತೆರೆದ ಪುಸ್ತಕದಂತಿದ್ದೇನೆ ಎಂದು ಹೇಳುತ್ತಿದ್ದಾರೆ. ಅವರು ತಪ್ಪು ಮಾಡಿಲ್ಲ ಎಂದರೆ ಏನೂ ಭಯಪಡುವ ಅವಶ್ಯಕತೆ ಇಲ್ಲ. ತನಿಖೆಗೆ ಅಡೆತಡೆ ಮಾಡದೇ ಸಹಕಾರ ನೀಡಬೇಕೆಂದರು.
ಸಿದ್ದರಾಮಯ್ಯ ಕಾನೂನು ಹೋರಾಟ ಮಾಡಲು ಸ್ವತಂತ್ರವಿದ್ದಾರೆ. ಇದಕ್ಕೆ ನಮ್ಮ ತಕರಾರು ಇಲ್ಲ. ಕಾನೂನು ಹೋರಾಟದ ನೆಪವಿಟ್ಟುಕೊಂಡು ತನಿಖೆಗೆ ಅಡ್ಡಿಪಡಿಸುವ ಕೆಲಸ ಮಾಡಬಾರದು ಎಂದರು.
ಯಾವುದೇ ಕಾರಣಕ್ಕೂ ಬಿಜೆಪಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ, ಅಸ್ಥಿರಗೊಳಿಸುವ ಕೆಲಸ ಮಾಡುವುದಿಲ್ಲ. ಐದು ವರ್ಷ ಅಧಿಕಾರ ನಡೆಸಲು ಜನರು ಜನಾದೇಶ ಕೊಟ್ಟಿದ್ದಾರೆ. ಅವರು ಐದು ವರ್ಷ ಸಂಪೂರ್ಣ ಅಧಿಕಾರ ನಡೆಸಲಿ ಎಂಬುದೇ ನಮ್ಮ ಆಶಯ ಎಂದರು.
ಬಿಜೆಪಿಯಲ್ಲಿ ಯಾವುದೇ ಆಂತರಿಕ ಬೇಗುದಿಯಿಲ್ಲ. ಬಸನಗೌಡಪಾಟೀಲ್ ಯತ್ನಾಳ ಅವರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಹೆಚ್ಚು ಹೇಳುವುದಿಲ್ಲ ಎಂದರು.