ಉಡುಪಿಯ ಇಂದಿರಾ ಕ್ಯಾಂಟಿನ್ಗೆ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಭೇಟಿ
ಉಡುಪಿ: ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಇಂದು ನಗರದ ಮಣಿಪಾಲದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಕ್ಯಾಂಟೀನ್‌ನ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟ ಸೇರಿದಂತೆ ಮತ್ತಿತರ ವಿಷಯಗಳನ್ನು ಪರಿಶೀಲನೆ ನಡೆಸಿದರು.
ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆಗೆ ಮೊದಲೇ ಆದ್ಯತೆ ನೀಡಬೇಕು. ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಕಾರ ನಿಗಧಿಪಡಿಸಿರುವ ಗುಣಮಟ್ಟದಲ್ಲಿ ವಿತರಣೆ ಆಗುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಕ್ಯಾಂಟೀನ್‌ಗಳಿಗೂ ಸಿ.ಸಿ.ಟಿ.ವಿ ಅಳವಡಿಕೆ ಮಾಡಲು ಈಗಾಗಲೇ ಆದೇಶ ಮಾಡಲಾಗಿದೆ. ಅದನ್ನು ಅಳವಡಿಸಬೇಕು. ಆಗ ಮಾತ್ರ ನಿಖರವಾಗಿ ಎಷ್ಟು ಜನರಿಗೆ ಆಹಾರ ವಿತರಣೆ ಆಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಸಾಧ್ಯ. ಇದಕ್ಕೆ ಒತ್ತು ನೀಡಬೇಕು ಎಂದು ಸಚಿವ ರಹೀಂ ಖಾನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಲಿಕಟ್ಟಿ, ಆಪ್ತ ಕಾರ್ಯದರ್ಶಿ ಡಾ.ಕೆ ಮುರುಳಿಧರ್, ಪೌರಾಯುಕ್ತ ರಾಯಪ್ಪ, ಸ್ಥಳೀಯ ಮುಖಂಡರುಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.